ಮಂಗಳೂರು, ಸೆ. 17 (DaijiworldNews/AA): ಅಡ್ಯಾರ್ನ ತಜಿಪೋಡಿ ಎಂಬಲ್ಲಿನ ಮನೆಯೊಂದರಲ್ಲಿ ಕ್ರಾಸ್ ಜರ್ಸಿ ಹಸುವನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಂಕನಾಡಿ ನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ದನವನ್ನು ರಕ್ಷಿಸಿ ವಶಕ್ಕೆ ಪಡೆದಿದ್ದಾರೆ.

ಸೆಪ್ಟೆಂಬರ್ 13ರ ಮುಂಜಾನೆ ಅಡ್ಯಾರ್ನಲ್ಲಿರುವ ಉಮೇಶ್ ಆಳ್ವ ಅವರ ಮನೆಯ ಅಂಗಳದಿಂದ ಹಸುವನ್ನು ಕಳವು ಮಾಡಲಾಗಿತ್ತು. ಕೂಡಲೇ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 303(2) ಅಡಿಯಲ್ಲಿ ಪ್ರಕರಣ ಸಂಖ್ಯೆ 144/2025 ದಾಖಲಿಸಲಾಗಿತ್ತು.
ಖಚಿತ ಮಾಹಿತಿಯ ಆಧಾರದ ಮೇಲೆ ಪೊಲೀಸರು ಹಸುವನ್ನು ಪತ್ತೆ ಹಚ್ಚಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಡ್ಯಾರ್ ನಿವಾಸಿ ಶಾಬಾಜ್ ಅಹಮ್ಮದ್, ವಳಚ್ಚಿಲ್ ಖಾದರ್ ಮೊಹಮ್ಮದ್ ಹಾಗೂ ಅರ್ಕುಳ-ವಳಚ್ಚಿಲ್ ನಿವಾಸಿ ಮೊಹಮ್ಮದ್ ಸುಹಾನ್ ಬಂಧಿತ ಆರೋಪಿಗಳು.
ತನಿಖೆಯಿಂದ ತಿಳಿದುಬಂದಂತೆ, ಶಾಬಾಜ್ ಮತ್ತು ಸುಹಾನ್ ಹಸುವನ್ನು ಕಳವು ಮಾಡಿ, ಅದನ್ನು ಖಾದರ್ ಮೊಹಮ್ಮದ್ಗೆ ಮಾರಾಟ ಮಾಡಿದ್ದರು. ಖಾದರ್ ಮೊಹಮ್ಮದ್ ಅದನ್ನು ಮಾಂಸ ಮಾಡಲು ಖರೀದಿಸಿದ್ದ ಎನ್ನಲಾಗಿದೆ. ಖಾದರ್ನ ನಿವಾಸಕ್ಕೆ ಹೊಂದಿಕೊಂಡಿರುವ ಶೆಡ್ನಲ್ಲಿ ಹಸುವನ್ನು ಜೀವಂತವಾಗಿ ಪತ್ತೆಹಚ್ಚಲಾಗಿದ್ದು, ಅಲ್ಲಿ ವಧೆಗಾಗಿ ಸಿದ್ಧತೆಗಳು ನಡೆಯುತ್ತಿದ್ದವು ಎಂದು ವರದಿಯಾಗಿದೆ.
"ಗುಪ್ತಚರ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ನಮ್ಮ ತಂಡವು ವಧೆಯನ್ನು ತಡೆದು ಹಸುವನ್ನು ಸುರಕ್ಷಿತವಾಗಿ ರಕ್ಷಿಸಿದೆ. ಈ ಕೃತ್ಯದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳು ಹಿಂದೆಯೂ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರುವುದು ಬಹಿರಂಗಗೊಂಡಿದೆ. ಶಾಬಾಜ್ ಅಹಮ್ಮದ್ ಒಬ್ಬ ಅಪರಾಧಿಯಾಗಿದ್ದು, ಮಂಗಳೂರು ಗ್ರಾಮಾಂತರ ಮತ್ತು ಕಂಕನಾಡಿ ನಗರ ಪೊಲೀಸ್ ಠಾಣೆಗಳಲ್ಲಿ ಒಂದು ಕೊಲೆ, ಎರಡು ಕೊಲೆ ಯತ್ನ ಮತ್ತು ಒಂದು ಸುಲಿಗೆ ಪ್ರಕರಣಗಳು ಆತನ ವಿರುದ್ಧ ದಾಖಲಾಗಿವೆ.
ಮೊಹಮ್ಮದ್ ಸುಹಾನ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಖಾದರ್ ಮೊಹಮ್ಮದ್ ವಿರುದ್ಧ ಈ ಹಿಂದೆ 2024ರಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದನದ ವಧೆ ಪ್ರಕರಣ ದಾಖಲಾಗಿತ್ತು.
ಅಕ್ರಮವಾಗಿ ಪ್ರಾಣಿ ವಧೆಗೆ ಯತ್ನಿಸಿದ ಕಾರಣ, ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ, 2020ರ ನಿಬಂಧನೆಗಳ ಅಡಿಯಲ್ಲಿ ಪ್ರಾಣಿಯನ್ನು ಹಿಡಿದಿಟ್ಟಿದ್ದ ಶೆಡ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆಸ್ತಿಯನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.