ಮಂಗಳೂರು, ಸೆ. 18 (DaijiworldNews/AK): ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ 18ನೇ ವಾರ್ಷಿಕ ಸಮಾರಂಭದ ಪ್ರಯುಕ್ತ ಸ್ವರ ಕುಡ್ಡ ಗ್ರಾಂಡ್ ಫಿನಾಲೆ ಹಾಗೂ ವಾರ್ಷಿಕ ಸಮಾರಂಭ, ಪ್ರಶಸ್ತಿ ಪ್ರದಾನ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬುಧವಾರ ನಡೆಯಿತು.






ಕಾರ್ಯಕ್ರಮವನ್ನು ಉದ್ಘಾಟಿಸಿದ ಉದ್ಯಮಿ ಶಶಿಧರ ಶೆಟ್ಟಿ ಬರೋಡ ಮಾತನಾಡಿ, ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ವತಿಯಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರ್ವಹಿಸಿ ಮಾದರಿ ಸಂಸ್ಥೆಯಾಗಿ ಬೆಳೆಯುತ್ತಿದೆ ಎಂದರು.
ಪತ್ರಕರ್ತ ವಾಲ್ಟರ್ನಂದಳಿಕೆ ಮಾತನಾಡಿ, ಇಂಪಾದ ಧ್ವನಿ, ಕಲೆಯ ಮೂಲಕ ಯಾರಿಗೂ ನೋವನ್ನು ಉಂಟು ಮಾಡದೆ ಜನರನ್ನು ರಂಜಿಸುತ್ತಿರುವುದು ಸಂಗೀತ ಕಲಾವಿದರು. ತುಳುನಾಡಿನಲ್ಲಿ ಕಲಾವಿದರಿಗೆ ಬೆಲೆ ಕಟ್ಟುವುದಕ್ಕಿಂತ ಬೆಲೆ ನೀಡುವವರಿದ್ದಾರೆ. ಜನರಿಗೆ ಮನೋರಂಜನೆ ನೀಡುವುದು ಸುಲಭವಲ್ಲ ಎಂದರು.
ಮೂವರಿಗೆ ಕರಾವಳಿ ಸಂಗೀತ ಕಲಾರತ್ನ ಪ್ರಶಸ್ತಿ ಪ್ರದಾನ
ಸಂಗೀತ ಕ್ಷೇತ್ರದ ಹಿರಿಯ ಕಲಾ ಸಾಧಕರಾದ ತೊನ್ನೆ ಪುಷ್ಕಳ ಕುಮಾರ್, ಐವನ್ ಸೀಕ್ವೆರಾ, ಹನೀಫ್ ಪರ್ಲಿಯಾ ಪರವಾಗಿ ಹುಸೈನ್ ಕಾಟಿಪಳ್ಳ ಅವರಿಗೆ ಕರಾವಳಿ ಸಂಗೀತ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸ್ವರ ಕುಡ್ಡ ಗ್ಯಾಂಡ್ ಫಿನಾಲೆ ವಿಜೇತರಿಗೆ ಪ್ರಶಸ್ತಿ ಪ್ರದಾನ ಮತ್ತು ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಸದಸ್ಯರಿಂದ ಸಂಗೀತ ರಸಮಂಜರಿ ನಡೆಯಿತು.
ಹಿರಿಯ ರಂಗಕರ್ಮಿ ವಿಜಯಕುಮಾರ್ ಕೊಡಿಯಾಲಬೈಲು, ಭಗವತಿ ಸಹಕಾರ ಬ್ಯಾಂಕ್ ನಿ. ಅಧ್ಯಕ್ಷ ಮಾಧವ ಬಿ.ಎಂ., ವಿರಾಜಪೇಟೆಯ ಡಿವೈಎಸ್ಪಿ ಮಹೇಶ್ ಕುಮಾರ್, ಸಾನ್ನಿಧ್ಯ ವಸತಿಯುತ ಶಾಲೆಯ ನಿರ್ದೇಶಕ ಜಗದೀಶ್ ಶೆಟ್ಟಿ ಬೋಳೂರು, ಉದ್ಯಮಿ ಗಿರೀಶ್ ಆಳ್ವ ಚಲನಚಿತ್ರ ನಿರ್ದೇಶಕ ಸಂತೋಷ್ ಮಾಡ, ಪ್ರಮುಖರಾದ ಪುಷ್ಪರಾಜ್, ದನುರಾಜ್ ಅತ್ತಾವರ, ಸುಭಾಷಿತ್ ಕುಮಾರ್ ಭಾಗವಹಿಸಿದ್ದರು. ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಕೇಶವ ಕನಿಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿಕಟಪೂರ್ವ ಅಧ್ಯಕ್ಷ ರಮೇಶ್ ಸಾಲ್ಯಾನ್ ಸ್ವಾಗತಿಸಿ. ಪ್ರಾಸ್ತಾವಿಸಿದರು. ಕಾರ್ಯದರ್ಶಿ ರಾಮ್ ಕುಮಾರ್ ಅಮೀನ್ ಅವರು ವಾರ್ಷಿಕ ಚಟುವಟಿಕೆಗಳ ವರದಿ ವಾಚಿಸಿದರು. ಕೃಷ್ಣ ಪ್ರಸಾದ್ ನಿರೂಪಿಸಿದರು. ಹರಿಣಿ ಉದಯ್ ಅವರು ವಂದಿಸಿದರು.