ಉಳ್ಳಾಲ, ಸೆ. 18 (DaijiworldNews/TA): ತಾಲ್ಲೂಕಿನ ಕಂಬಳ ಪದವುನಿಂದ ಮುಡಿಪು- ಮುದುಂಗಾರು ತನಕದ ರಸ್ತೆಯು ಹೊಂಡಮಯಗೊಂಡು ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ತಕ್ಷಣ ರಸ್ತೆಗಳನ್ನು ದುರಸ್ಥಿಗೊಳಿಸಲು ಒತ್ತಾಯಿಸಿ ಡಿವೈಎಫ್ಐ ಮುಡಿಪು ಉಳ್ಳಾಲ ವಲಯ ಸಮಿತಿ ನೇತೃತ್ವದಲ್ಲಿ ಮುಡಿಪುವಿನಲ್ಲಿ ಪ್ರತಿಭಟನೆ ನಡೆಸಲಾಯಿತು.


ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲೆಯ ಉದ್ದಗಲಕ್ಕೂ ರಸ್ತೆ ಗಳು ಸಂಪೂರ್ಣ ಹದಗೆಟ್ಟಿವೆ. ನಿರಂತರವಾಗಿ ಸಾರ್ವಜನಿಕರು ಸಾವು ನೋವುಗಳನ್ನು ಅನುಭವಿಸುತ್ತಲೇ ಇದ್ದಾರೆ. ಇದರ ವಿರುದ್ದ ಡಿವೈಎಫ್ಐ ನೇತೃತ್ವದಲ್ಲೇ ಮಂಗಳೂರು-ಉಳ್ಳಾಲ ಭಾಗದಲ್ಲಿ ಒಂಬತ್ತನೇ ಪ್ರತಿಭಟನೆ ನಡೆಸಲಾಗುತ್ತಿದೆ. ಹಾಗಿದ್ದರೂ ಇಲ್ಲಿನ ಶಾಸಕರು ನಿದ್ದೆಯಿಂದ ಎದ್ದೇಳದೇ ಇರುವುದು ಖೇದಕರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷ ರಝಾಕ್ ಮುಡಿಪು, ಉಳ್ಳಾಲ ವಲಯ ಕಾರ್ಯದರ್ಶಿ ರಿಝ್ವಾನ್ ಹರೇಕಳ, ಮುಡಿಪು ಆಟೋ ರಿಕ್ಷಾ ಯೂನಿಯನ್ ನ ಹರೀಶ, ದಲಿತ ಸಂಘಟನೆ ನಾಯಕ ನಾಗೇಶ್ ಮೊಂಟೆಪದವು, ಸಾಮಾಜಿಕ ಕಾರ್ಯಕರ್ತ ಅಬೂಬಕರ್ ಜಲ್ಲಿ, ಕಾರ್ಮಿಕ ಮುಖಂಡ ರಫೀಕ್ ಹರೇಕಳ, ಡಿವೈಎಫ್ಐ ಮುಡಿಪು ನಾಯಕರಾದ ಇರ್ಫಾನ್ ಇರಾ, ಶಾಫಿ ಮೊಂಟೆಪದವು, ಮುಂತಾದವರು ಉಪಸ್ಥಿತರಿದ್ದರು.