ಬಂಟ್ವಾಳ, ಸೆ.21 (DaijiworldNews/TA): ರಾಷ್ಟ್ರೀಯ ಹೆದ್ದಾರಿ 75 ರ ಮಂಗಳೂರು - ಬೆಂಗಳೂರು ರಸ್ತೆಯ ಬ್ರಹ್ಮರಕೋಟ್ಲು ಎಂಬಲ್ಲಿ ಟೋಲ್ ಪ್ಲಾಜಾದ ಬಳಿಯಲ್ಲಿ ರಸ್ತೆಯ ಡಾಮರು ಸಂಪೂರ್ಣ ಕಿತ್ತುಹೋಗಿ ಬೃಹತ್ ಗುಂಡಿಗಳು ಬಿದ್ದು ಸಂಚಾರಕ್ಕೆ ಅಡಚಣೆಯಾಗುತ್ತಿದ್ದ ಬಗ್ಗೆ ಮಾಧ್ಯಮ ವರದಿಗೆ ಎಚ್ಚೆತ್ತುಕೊಂಡ ರಾಷ್ಟ್ರೀಯ ಹೆದ್ದಾರಿ ಇಲಾಖೆ ಡಾಮರು ಹಾಕಿಕೊಟ್ಟಿದೆ.


ಮಂಗಳೂರಿನಿಂದ ಬರುವ ವೇಳೆ ಟೋಲ್ ಪ್ಲಾಜಾಕ್ಕೆ ಎಂಟ್ರಿ ಕೊಡುವ ಮುನ್ನ ಬೃಹತ್ ಗುಂಡಿಗಳ ದರ್ಶನವಾಗುತ್ತಿತ್ತು. ಕಳೆದ ಹಲವಾರು ತಿಂಗಳಿನಿಂದ ರಾಮಲ್ ಕಟ್ಟೆಯಿಂದ ಬ್ರಹ್ಮರಕೋಟ್ಲು ಟೋಲ್ ಪ್ಲಾಜಾದ ಬಳಿ ಬರಲು ಕೆಲವು ತಾಸುಗಳೇ ಬೇಕಾಗಿತ್ತು.
ರಸ್ತೆಯ ಉದ್ದ ಅಲ್ಲಲ್ಲಿ ಗುಂಡಿಗಳು ಬಿದ್ದು, ವಾಹನಗಳು ಗುಂಡಿಗೆ ಬಿದ್ದು ಎದ್ದು ಹೋಗುವುದರಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿತ್ತು. ಮೂಲಭೂತವಾದ ಸೌಕರ್ಯಗಳಿಂದ ವಂಚಿತವಾಗಿದ್ದ ಟೋಲ್ ಪ್ಲಾಜಾಕ್ಕೆ ಕಾಯಕಲ್ಪ ಇಲ್ಲದೆ ರೋಸಿ ಹೋಗದೆ ಸವಾರರಿಗೆ ರಸ್ತೆಯ ಅವ್ಯವಸ್ಥೆ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ತಾತ್ಕಾಲಿಕವಾಗಿ ಡಾಮರು ಹಾಕಿ ಗುಂಡಿಯನ್ನು ಮುಚ್ಚಿರುವ ಇಲಾಖೆ ಸಾರ್ವಜನಿಕರ ಕೋಪಕ್ಕೆ ತಕ್ಕಮಟ್ಟಿಗೆ ತಣ್ಣೀರು ಹಾಕಿದೆ.