ಮಂಗಳೂರು, ಸೆ. 21 (DaijiworldNews/AA): ಆಟೋದಲ್ಲಿ ಬಂದು ಕಾರ್ನಾಡ್ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಮುಲ್ಕಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಸುರತ್ಕಲ್ನ ಕಾಟಿಪಳ್ಳ ಕೃಷ್ಣಾಪುರದ ನಿವಾಸಿ ಯತಿರಾಜ್(27) ಬಂಧಿತ ಆರೋಪಿ.
ಆರೋಪಿ ಯತಿರಾಜ್ 1.2 ಕಿಲೋಗ್ರಾಂ ಗಾಂಜಾ, ಸಾಗಣೆಗೆ ಬಳಸಿದ ಆಟೋ ಮತ್ತು ಹಿಂದಿನ ಮಾರಾಟದಿಂದ ಬಂದ 300 ರೂ. ನಗದಿನೊಂದಿಗೆ ರೆಡ್ ಹ್ಯಾಂಟ್ ಆಗಿ ಸಿಕ್ಕಿಬಿದ್ದಿದ್ದಾನೆ. ಬಂಧನದ ನಂತರ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಸೆಪ್ಟೆಂಬರ್ 14 ಗಾಂಜಾ ಸೇವನೆ ಮಾಡಿದ ಆರೋಪದ ಮೇರೆಗೆ ಮೂವರು ವ್ಯಕ್ತಿಗಳಾದ ಮುಲ್ಕಿ ಕಾಪಿಕಾಡ್ನ ಪ್ರಜ್ವಲ್ (25), ಬೈಕಂಪಾಡಿಯ ಕುರಿಕಟ್ಟೆ ನಿವಾಸಿ ಪ್ರಮೋದ್ (22) ಮತ್ತು ಸ್ಟೀವನ್ (29) ಅವರನ್ನು ಬಂಧಿಸಲಾಗಿತ್ತು. ಬಂಧಿತರು ವಿಚಾರಣೆ ವೇಳೆ ಯತಿರಾಜ್ನ ಕುರಿತು ನಿರ್ಣಾಯಕ ಮಾಹಿತಿಯನ್ನು ಒದಗಿಸಿದ್ದರು ಎಂದು ತಿಳಿದುಬಂದಿದೆ.
ಕಾರ್ಯಾಚರಣೆಯ ಯಶಸ್ಸಿನ ಕುರಿತು ಮಾತನಾಡಿದ ಪೊಲೀಸ್ ಅಧಿಕಾರಿಗಳು, "ಹಿಂದಿನ ಬಂಧನಗಳಿಂದ ಪಡೆದ ಮಾಹಿತಿಯು ಪ್ರಮುಖ ಗಾಂಜಾ ಪೂರೈಕೆದಾರನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ನಮಗೆ ಸಹಾಯ ಮಾಡಿತು. ಸ್ಥಳೀಯ ವಿತರಣಾ ಜಾಲವನ್ನು ಹತ್ತಿಕ್ಕುವಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ" ಎಂದು ಹೇಳಿದರು.
ಮಾದಕ ವಸ್ತುಗಳು, ಬಳಸಿದ ವಾಹನ ಮತ್ತು ನಗದನ್ನು ವಶಪಡಿಸಿಕೊಂಡಿರುವ ಮುಲ್ಕಿ ಪೊಲೀಸರು, ಪ್ರದೇಶದಲ್ಲಿ ಅಕ್ರಮ ಮಾದಕ ದ್ರವ್ಯ ಚಟುವಟಿಕೆಯ ಬೆಳೆಯುತ್ತಿರುವ ಜಾಲವನ್ನು ಭೇದಿಸುವ ಗುರಿಯೊಂದಿಗೆ ತಮ್ಮ ಕಣ್ಗಾವಲನ್ನು ತೀವ್ರಗೊಳಿಸಿದ್ದಾರೆ.