ಬಂಟ್ವಾಳ, ಸೆ. 21 (DaijiworldNews/AA): ಅಕ್ರಮವಾಗಿ ದನಗಳನ್ನು ಕಡಿದು ಮಾಂಸ ಮಾಡುತ್ತಿದ್ದ ವೇಳೆ ಬಂಟ್ವಾಳ ಗ್ರಾಮಾಂತರ ಪೋಲೀಸರು ದಾಳಿ ನಡೆಸಿ ಆರೋಪಿಯೋರ್ವನನ್ನು ಬಂಧಿಸಿದ್ದಾರೆ.

ಪೋಲೀಸರ ದಾಳಿ ವೇಳೆ ಪ್ರಮುಖ ಆರೋಪಿ ನಾಸೀರ್ ಸಹಿತ ಇತರರು ಪರಾರಿಯಾಗಿದ್ದು, ಮುಲ್ಕಿ ಕೃಷ್ಣಾಪುರ ಕಾರ್ನಾಡು ನಿವಾಸಿ ತೌಸೀಫ್ ಎಂಬಾತನನ್ನು ಬಂಧಿಸಲಾಗಿದೆ.
ದಾಳಿ ವೇಳೆ ದಂಧೆಗೆ ಬಳಸಿದ ರಿಕ್ಷಾ ಹಾಗೂ ಮಾಂಸ ಮಾಡಲು ಕಟ್ಟಿ ಹಾಕಿದ ದನಗಳ ಸಹಿತ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಸಂಗಬೆಟ್ಟು ಗ್ರಾಮದ ಕೆರೆ ಬಳಿ ನಾಸಿರ್ ಯಾನೆ ಹುಸೇನಬ್ಬ, ರಶೀದ್ ಮತ್ತು ಇತರರು ದನವನ್ನು ತಂದು ವಧೆ ಮಾಡುತ್ತಿರುವ ಬಗ್ಗೆ ಮಾಹಿತಿಯ ಬಂದ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೋಲೀಸರ ತಂಡ ದಾಳಿ ನಡೆಸಿದೆ.
ಸಂಗಬೆಟ್ಟು ಗ್ರಾಮದ ಕೆರೆಬಳಿ ಮನೆ ಸಂಗಬೆಟ್ಟು ಎಂಬಲ್ಲಿ ಮನೆಯೊಂದಕ್ಕೆ ದಾಳಿ ಮಾಡಿದಾಗ ಅಲ್ಲಿ ನಾಸೀರ್ ರಶೀದ್, ಮತ್ತು ಇತರರು ಅಕ್ರಮವಾಗಿ ಕಳ್ಳತನಮಾಡಿ ತಂದ ಒಂದು ದನವನ್ನು ವಧೆ ಮಾಡಿ ಮಾಂಸ ಮಾಡಲು ತಯಾರಿ ನಡೆಸುತ್ತಿದ್ದರು ಮತ್ತು ವಧೆ ಮಾಡಲು 9 ದನಗಳನ್ನು ತಂದು ಕಟ್ಟಿ ಹಾಕಿದ್ದರು.
ಸ್ಥಳದಲ್ಲಿ ಕಟ್ಟಿ ಹಾಕಿದ್ದ 9 ದನಗಳನ್ನು ರಕ್ಷಿಸಿ ವಶಕ್ಕೆ ಪಡೆದು ಗೋಶಾಲೆಗೆ ಹಸ್ತಾಂತರಿಸಿದ್ದಾರೆ. ಸ್ಥಳದಲ್ಲಿ ಇದ್ದ ಮಾಂಸ ಹಾಗೂ ಮಾಂಸ ಮಾಡಲು ಉಪಯೋಗಿಸಿದ ಸೊತ್ತುಗಳ ಸಹಿತ ಕೃತ್ಯಕ್ಕೆ ಬಳಸಿದ ವಾಹನ ಆಟೋರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ವಿರುದ್ದ ಠಾಣಾ ಅಕ್ರ 143/2025 ಕಲಂ: 303(2), 307 ಬಿ.ಎನ್.ಎಸ್ ಕಲಂ: 4,7,12 ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020 ಹಾಗೂ ಕಲಂ 11(ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಧಿತ ಆರೋಪಿಯನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,ನ್ಯಾಯಲಯವು ಈತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.