ಮಂಗಳೂರು, ಸೆ. 22 (DaijiworldNews/AA): ಯಕ್ಷಗಾನ ವೇಷ ಧರಿಸಿ ಭಿಕ್ಷಾಟನೆ ಮಾಡುವುದನ್ನು ನಿಷೇಧಿಸುವಂತೆ ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠವು ದ.ಕ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರಿಗೆ ಮನವಿ ಮಾಡಿದೆ.

ವೇದಿಕೆಗಳಲ್ಲಿ ಮಾತ್ರ ಈ ಧಾರ್ಮಿಕ ಶ್ರೇಷ್ಠ ಕಲೆಯ ಪ್ರದರ್ಶನವಾಗಬೇಕು. ಆದರೆ ಅಷ್ಠಮಿ, ಗಣೇಶೋತ್ಸವ, ನವರಾತ್ರಿ ಮೊದಲಾದ ಸಂದರ್ಭದಲ್ಲಿ ಯಕ್ಷಗಾನ ವೇಷ ಧರಿಸಿಕೊಂಡು ಭಿಕ್ಷೆ ಎತ್ತುವುದು ಕಂಡು ಬರುತ್ತಿದೆ.
ಯಕ್ಷಗಾನಕ್ಕೆ ತಾನೇ ಆದ ಗೌರವವಿದೆ. ಇದು ಪೂಜನೀಯವೂ ಆಗಿದ್ದು, ದೇಶ ವಿದೇಶಗಳಲ್ಲಿ ತನ್ನ ಕಂಪನ್ನು ಪಸರಿಸಿದೆ. ಇ೦ತಹ ಯಕ್ಷಗಾನವನ್ನು ಯಾರೋ ಇದರ ಗಂಧ ಗಾಳಿ ಗೊತ್ತಿಲ್ಲದವರು ಮುಖಕ್ಕೆ ಹಬ್ಬದಲ್ಲಿ ದಿನಗಳಲ್ಲಿ ಬಣ್ಣ ಹಚ್ಚಿಕೊಂಡು ಬಾಡಿಗೆಗೆ ಸಿಗುವ ಯಕ್ಷಗಾನದ ವೇಷಭೂಷಣ ತೊಟ್ಟುಕೊಂಡು ಅಸಹ್ಯಕರವಾಗಿ ಕುಚೇಷ್ಟೆ ಮಾಡುತ್ತಾ ಭಿಕ್ಷಾಟನೆ ಮಾಡುವುದನ್ನ ಕಾಣುತ್ತಿದ್ದೇವೆ. ಇದನ್ನು ನಿಷೇಧಿಸುವಂತೆ ಮನವಿ ಮಾಡಲಾಗಿದೆ ಎಂದು ಪ್ರಕೋಷ್ಠದ ಸಂಚಾಲಕ, ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.