ಮಂಗಳೂರು, ಸೆ. 22 (DaijiworldNews/AK): ಮುಂಬೈನಿಂದ ಮಾದಕ ವಸ್ತು ತಂದು ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ ನಗರ ಸಿಸಿಬಿ ಪೊಲೀಸ್ ಘಟಕವು ಎರಡು ಪ್ರತ್ಯೇಕ ಪ್ರಕರಣದಲ್ಲಿ 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕಾವೂರು ಗಾಂಧಿನಗರದ ಮಲ್ಲಿ ಲೇ ಔಟ್ಗೆ ಸೆ.21ರಂದು ಬೆಳಗ್ಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಕಾವೂರು ಗಾಂಧಿನಗರದ ಚಿರಾಗ್ ಸನಿಲ್ ಮತ್ತು ಅಶೋಕ ನಗರದ ಆಲ್ವಿನ್ ಕ್ಲಿಂಟನ್ ಡಿಸೋಜ ಎಂಬವರನ್ನು ಎಂಡಿಎಂಎ ಮಾದಕ ವಸ್ತುವಿನೊಂದಿಗೆ ಪತ್ತೆ ಹಚ್ಚಿದ್ದಾರೆ.
ಆರೋಪಿಗಳಿಂದ 22,30,000 ರೂ. ಮೌಲ್ಯದ 111.83 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಆರೋಪಿಗಳನ್ನು ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ಕೇರಳದ ಅಬ್ದುಲ್ ಕರೀಂ ಇ.ಕೆ. ಎಂಬಾತನು ನೀಡಿದ ಹಣದಿಂದ ಮುಂಬೈ ಯಲ್ಲಿ ವಾಸವಿರುವ ಆಫ್ರಿಕನ್ ಪ್ರಜೆ ಬೆಂಜಮಿನ್ ಎಂಬಾತನಿಂದ ಆರೋಪಿ ಚಿರಾಗ್ ಸನಿಲ್ ಮಾದಕ ವಸ್ತು ಖರೀದಿ ಮಾಡಿ ತಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಾದಕ ವಸ್ತು ಖರೀದಿಸಲು ಹಣ ನೀಡಿದ ಕೇರಳದ ಮಲಪ್ಪುಂರ ಜಿಲ್ಲೆಯ ಅಬ್ದುಲ್ ಕರೀಂ ಇ.ಕೆ ಎಂಬಾತನನ್ನು ಸೆ.22ರಂದು ನಗರದ ಕೇಂದ್ರ ರೈಲ್ವೆ ನಿಲ್ದಾಣದ ಬಳಿ ಬಂಧಿಸಲಾಗಿದೆ. ಈತನನ್ನು ವಿಚಾರಿಸಿದಾಗ ತನ್ನಲ್ಲಿದ್ದ ಕೊಕೇನ್ ಮಾದಕ ವಸ್ತುಗಳನ್ನು ಮೂವರಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದ. ಅದರಂತೆ ಮಣ್ಣಗುಡ್ಡೆಯ ಸೆಂಟ್ರಲ್ ವೇರ್ ಹೌಸ್ ಬಳಿ ನಿಂತುಕೊಂಡಿದ್ದ ಕುಲಶೇಖರ ಸಿಲ್ವರ್ಗೇಟ್ ನಿವಾಸಿ ಜನನ್ ಯಾನೆ ಜನನ್ ಜಗನ್ನಾಥ, ಬೋಳೂರಿನ ರಾಜೇಶ್ ಬಂಗೇರ ಯಾನೆ ಅಚ್ಚು ಯಾನೆ ರಕ್ಷಿತ್, ಅಶೋಕ ನಗರ ದಂಬೇಲ್ ನಿವಾಸಿ ವರುಣ್ ಗಾಣಿಗ ಎಂಬವರನ್ನು ಬಂಧಿಸಲಾಯಿತು. ಈ ಆರೋಪಿಗಳಿಂದ 1,90,000 ರೂ. ಮೌಲ್ಯದ ಸುಮಾರು 21.03 ಗ್ರಾಂ ಕೊಕೇನ್ ವಶಪಡಿಸಲಾಗಿದೆ. ಈ ಆರೋಪಿಗಳ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.