ಮಂಗಳೂರು : ದೈಜಿವರ್ಲ್ಡ್ ಅರ್ಪಿಸುತ್ತಿದೆ 'ದಿ ಕಾಮನ್ ಮ್ಯಾನ್ ಶೋ '- ಸಾಮಾನ್ಯರ ಅಸಾಮಾನ್ಯ ಕಥೆ!
Tue, Sep 23 2025 10:33:19 AM
ಮಂಗಳೂರು, ಸೆ. 23 (DaijiworldNews/TA): ನಗರದ ಪ್ರಮುಖ ಸುದ್ದಿಭಿತ್ತರ ಹಾಗು ಮನೋರಂಜನೆಯ ವಾಹಿನಿಯಾದ ದೈಜಿವರ್ಲ್ಡ್ 24x7, ಸಾಮಾನ್ಯನ ಅಸಾಮಾನ್ಯ ಕಥೆಗಳ ಸಂಗ್ರಹವಾಗಿರುವ ‘ದಿ ಕಾಮನ್ ಮ್ಯಾನ್ ಶೋ’ ಎಂಬ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಸೆಪ್ಟೆಂಬರ್ 21 ರಂದು, ಭಾನುವಾರದ ರಾತ್ರಿ 9:00 ಗಂಟೆಗೆ ಈ ಕಾರ್ಯಕ್ರಮ ತನ್ನ ಪ್ರಥಮ ಪ್ರಸಾರವನ್ನು ದೈಜಿವರ್ಲ್ಡ್ ಟಿವಿ ಮತ್ತು ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾಋ ಪ್ರಾರಂಭಿಸಿದೆ. 6.75 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಚಾನೆಲ್, ಸಾಮಾಜಿಕ ಮಾಧ್ಯಮಗಳಲ್ಲಿಯೂ ಹೆಸರುವಾಸಿಯಾಗಿದ್ದು ಇದೀಗ ಸಾಮಾನ್ಯರ ಬದುಕಿನ ಚಿತ್ರಣದ ಭಿತ್ತರಕ್ಕೆ ಸಿದ್ದವಾಗಿದೆ.
ಈ ಕಾರ್ಯಕ್ರಮವು ಚಲನಚಿತ್ರ ತಾರೆಯರು ಅಥವಾ ರಾಜಕೀಯ ನಾಯಕರ ಜೀವನವಿಲ್ಲ, ಬದಲಾಗಿ ನಮ್ಮ ಸುತ್ತಲಿರುವ ಸಾಮಾನ್ಯ ವ್ಯಕ್ತಿಗಳ ನಿಜವಾದ, ಸ್ಪೂರ್ತಿದಾಯಕ ಮತ್ತು ನೈಜ ಕಥೆಗಳನ್ನು ಕೇಂದ್ರವಾಗಿಟ್ಟ ವಿಭಿನ್ನ ಕಾರ್ಯಕ್ರಮ. ಆಟೋ ಚಾಲಕರು, ಕೈಗಾಡಿ ಎಳೆಯುವವರು, ಮೀನುಗಾರ ಮಹಿಳೆಯರು, ಬಸ್ ಕಂಡಕ್ಟರ್ಗಳು, ಪೋಸ್ಟ್ಮ್ಯಾನ್ಗಳು ಇಂತಹ ಜೀವಂತ ಕಥಾನಾಯಕರ ಜೀವನದೊಳಗಿನ ನಗು, ನೋವು, ಸವಾಲು, ಸಾಧನೆಗಳನ್ನು ಎಲ್ಲರ ಮುಂದಿಡುವ ಪ್ರಯತ್ನವಿದು.
ಕಾರ್ಯಕ್ರಮದ ನಿರೂಪಕರಾಗಿರುವವರು ದೈಜಿವರ್ಲ್ಡ್ ಮೀಡಿಯಾದ ಸಂಸ್ಥಾಪಕ ವಾಲ್ಟರ್ ನಂದಳಿಕೆ. ‘ಕೊರೊನಾ ಗೆಲ್ಲೋನಾ’, ‘ಪ್ರೈವೇಟ್ ಚಾಲೆಂಜ್’, ‘ಕಿರಿ ಕಿರಿ ಜೋಡಿಲು’ ಹೀಗೆ ಹಲವಾರು ಹಿಟ್ ಕಾರ್ಯಕ್ರಮಗಳನ್ನು ಸೃಷ್ಟಿಸಿದ ಇವರಿಗೆ ಈ ಶೋ ಸಾಮಾಜಿಕ ಕನ್ನಡಿ ಆಗಲಿದೆ. ಜೊತೆಗೆ, ಪ್ರಸಿದ್ಧ ತುಳು ಹಾಸ್ಯ ತಾರೆಯರು ಸುಂದರ ಬಂಗಾಡಿ ಮತ್ತು ಸಿಕೆ ಪ್ರಶಾಂತ್ ಅವರ ಹಾಸ್ಯ ನಟನೆಗಳು ಪ್ರತಿ ಸಂಚಿಕೆಗೆ ಉಜ್ವಲತೆ ನೀಡಲಿವೆ.
ಪ್ರತಿ ಶೋ 45 ನಿಮಿಷಗಳ ಕಾಲ ನಡೆಯಲಿದ್ದು, ವಾರದಲ್ಲಿ ಎರಡು ಪುನ: ಪ್ರಸಾರಗಳ ವ್ಯವಸ್ಥೆ ಇರುತ್ತದೆ. ವಿಶೇಷವೆಂದರೆ, ಲೈವ್ ಸ್ಟುಡಿಯೋ ರೀತಿಯಲ್ಲಿ ಪ್ರೇಕ್ಷಕರ ನೇರ ಆಗಮನದಿಂದ ಈ ಶೋ ಇನ್ನಷ್ಟು ಸಂವಾದಾತ್ಮಕ ಮತ್ತು ಉತ್ಸಾಹ ಪೂರ್ಣವಾಗಲಿದೆ. ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳನ್ನು ಪ್ರೇಕ್ಷಕರಾಗಿ ಸೇರಿಸಿಕೊಳ್ಳುವ ಈ ಪ್ರಯೋಗ, ಯುವಜನತೆಗೆ ನೈಜ ಜೀವನದ ಕಠಿಣತನದ ಬಗ್ಗೆಯೂ, ದೈನಂದಿನ ಹಾಸ್ಯವನ್ನೂ ಪರಿಚಯಿಸಲಿದೆ.
ಕಾರ್ಯಕ್ರಮದ ಪರಿಕಲ್ಪನೆಯ ಕುರಿತು ಮಾತನಾಡಿದ ವಾಲ್ಟರ್ ನಂದಳಿಕೆ, “ನಮ್ಮ ಸಮಾಜದ ನಿಜವಾದ ನಾಯಕರನ್ನು ಗುರುತಿಸಿ, ಅವರ ಘನತೆ ಮತ್ತು ಹೋರಾಟಗಳನ್ನು ಹಬ್ಬದಂತಹ ರೀತಿಯಲ್ಲಿ ಆಚರಿಸುವುದೇ ನಮ್ಮ ಉದ್ದೇಶ. ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯಲ್ಲೂ ಅಸಾಮಾನ್ಯ ಕಥೆ ಇದೆ. ಅವುಗಳನ್ನು ಶ್ರದ್ಧೆಯೊಂದಿಗೆ ಹೇಳುವುದು ನಮ್ಮ ಧ್ಯೇಯ,” ಎಂದು ಹೇಳಿದರು.
40 ಎಪಿಸೋಡ್ಗಳಾಗಿ ಮೊದಲ ಸೀಸನ್ಗಾಗಿ ಪ್ರಸ್ತುತಪಡಿಸಲಾದ ಈ ಶೋ, ಮಂಗಳೂರಿನ ಭಾರತ್ ಬೆವರೇಜಸ್ ಮತ್ತು ದಕ್ಷಿಣ್ ಟೀ ಅವರ ಪ್ರಾಯೋಜಕತ್ವವನ್ನು ಹೊಂದಿದ್ದು, ವೈವಿಧ್ಯಮಯ ಸಾಮಾಜಿಕ ಮಾಧ್ಯಮ ಶ್ರೇಣಿಗಳಲ್ಲಿಯೂ ವಿಸ್ತಾರವಾಗಿ ತಲುಪಲಿದೆ. ಟಿ.ವಿ ಹಾಗೂ ಡಿಜಿಟಲ್ ಪ್ರೇಕ್ಷಕರಿಗೆ ಒಂದೇ ರೀತಿ ತಾಜಾ ಅನುಭವ ನೀಡುವಂತೆ ಯೋಜನೆ ರೂಪಿಸಲಾಗಿದೆ.
ದಿ ಕಾಮನ್ ಮ್ಯಾನ್ ಶೋ ಈಗಾಗಲೇ ಸಮಾಜಮುಖಿ ದೃಷ್ಟಿಕೋಣ, ನಿಜವಾದ ಕಥೆ ಹೇಳುವ ಶೈಲಿ ಮತ್ತು ಹಾಸ್ಯಭರಿತ ನಿರೂಪಣೆಯೊಂದಿಗೆ ಎಲ್ಲಾ ವಯೋಮಾನದ ಪ್ರೇಕ್ಷಕರ ಹೃದಯ ಗೆಲ್ಲುವ ಭರವಸೆಯೊಂದಿಗೆ ಮೂಡಿಬರುವ ಪ್ರಯತ್ನವಾಗಿದೆ.