ಮಂಗಳೂರು, ಸೆ. 23 (DaijiworldNews/AA): ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಜಂಕ್ಷನ್ ನಲ್ಲಿ ಜಲ್ಲಿಕಲ್ಲು ಸಾಗಾಟ ಮಾಡುತ್ತಿದ್ದ ಟ್ರಕ್ ನಿಂದ ಬಿದ್ದಿದ್ದ ಭಾರೀ ಪ್ರಮಾಣದ ಜಲ್ಲಿಯನ್ನು ಹೈವೆ ಪ್ಯಾಟ್ರೋಲ್ ವಾಹನದ ಸಿಬ್ಬಂದಿ ಸ್ಥಳೀಯ ಯುವಕರೊಂದಿಗೆ ಸೇರಿ ತೆರವು ಮಾಡುವ ಮೂಲಕ ಹಲವು ಸಂಭವನೀಯ ಅಪಘಾತಗಳನ್ನು ತಪ್ಪಿಸಿದ್ದಾರೆ.



ಹೆದ್ದಾರಿ ಗಸ್ತು ವಾಹನದಲ್ಲಿದ್ದ ಹೆಡ್ಕಾನ್ ಸ್ಟೇಬಲ್ ಮಹಾಂತೇಶ್ ಕಿಲಾರಿ ಮತ್ತು ಚಾಲಕ ಆನಂದ್ ಮೇಟಿ ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿದ್ದ ಭಾರೀ ಪ್ರಮಾಣದ ಜಲ್ಲಿಯನ್ನು ಗಮನಿಸಿ, ತಕ್ಷಣವೇ ತೆರವಿಗೆ ಮುಂದಾಗಿದ್ದಾರೆ. ಜೊತೆಗೆ ಅಲ್ಲೇ ಪಕ್ಕದ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ 5-6ಯುವಕರಿಗೆ ಸಂಭವಿಸಬಹುದಾದ ಅಪಘಾತದ ಕುರಿತು ಮನವರಿಕೆ ಮಾಡಿ ಅವರನ್ನು ಕರೆಸಿಕೊಂಡು ಜಲ್ಲಿ ತೆರವು ಮಾಡಿದ್ದಾರೆ.
ಹೆದ್ದಾರಿಯ ಸುಮಾರು 100ಮೀ. ಉದ್ದಕ್ಕೆ ಹರಡಿಕೊಂಡಿದ್ದ ಸುಮಾರು 10 ಬುಟ್ಟಿಗಳಷ್ಟಿದ್ದ ಜಲ್ಲಿಯನ್ನು ಯುವಕರು ಮತ್ತು ಪೊಲೀಸರು ಗುಡಿಸಿ ತೆಗೆದು ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಾಹನ ಕರೆಸಿ ಅದಕ್ಕೆ ತುಂಬಿಸಿ ಕಳುಹಿಸಿದ್ದಾರೆ.
ತುರ್ತು ಪರಿಸ್ಥಿತಿ ಅರ್ಥೈಸಿಕೊಂಡು ನಡೆಯಬಹುದಾಗಿದ್ದ ಸಂಭವನೀಯ ಅನಾಹುತವನ್ನು ತಪ್ಪಿಸಿ, ತಕ್ಷಣ ಕಾರ್ಯಪ್ರವೃತ್ತರಾಗಿ ಹೆದ್ದಾರಿಯಲ್ಲಿ ಹರಡಿಕೊಂಡಿದ್ದ ಜಲ್ಲಿಯನ್ನು ತೆರವು ಮಾಡಿದ ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯ ಯುವಕರ ಸಮಯಪ್ರಜ್ಞೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.