ಬಂಟ್ವಾಳ, ಸೆ. 26(DaijiworldNews/TA): ತುಂಬೆ ರಾಮಲ್ ಕಟ್ಟೆ ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ.) ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ಇದರ ವತಿಯಿಂದ ಶ್ರೀ ಶಾರದಾ ಸಮುದಾಯ ಭವನ ಉದ್ಘಾಟನಾ ಸಮಾರಂಭ ಮತ್ತು ಶ್ರೀ ಶಾರದಾ ರಜತ ಸಂಭ್ರಮ ಮಹೋತ್ಸವ ಸಂಭ್ರಮ 2025 ಕಾರ್ಯಕ್ರಮ ಸೆ.27ರಿಂದ ಸೆ.30 ರ ವರೆಗೆ ಶ್ರೀರಾಮ ನಗರ ರಾಮಲ್ ಕಟ್ಟೆ ತುಂಬೆ ಇಲ್ಲಿ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಸಂಚಾಲಕ ತೇವು ತಾರಾನಾಥ ಕೊಟ್ಟಾರಿ ತಿಳಿಸಿದರು.

ಅವರು ತುಂಬೆ ಶ್ರೀ ಶಾರದಾ ಸಭಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತುಂಬೆ ಪರಿಸರದಲ್ಲಿ ಯುವಕರ ತಂಡ ಧಾರ್ಮಿಕ ಸೇವಾ ಮತ್ತು ಸಂಘಟನಾತ್ಮಕ ದೃಷ್ಟಿಯಿಂದ ಆರಂಭವಾದ ಸಂಘಟನೆ ಇದೀಗ ರಜತ ವರ್ಷದ ಶಾರದಾ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿದೆ ಎಂದರು. ಕಳೆದ 24 ವರ್ಷಗಳ ಹಿಂದೆ ಸುಮಾರು 22 ಸೆಂಟ್ಸ್ ಜಾಗವನ್ನು ಖರೀದಿ ಮಾಡಿ ಸಣ್ಣ ಪ್ರಮಾಣದ ಸಭಾಭವನವನ್ನು ತಳ ಅಂತಸ್ತಿನಲ್ಲಿ ರಚಿಸಿಕೊಂಡಿತ್ತು. ಇದೀಗ ರಜತ ಮಹೋತ್ಸವದ ಸವಿನೆನಪಿಗಾಗಿ ಸುಮಾರು 16000 ಚದರ ಅಡಿಯ ಸುಸಜ್ಜಿತವಾದ ಸಮುದಾಯ ಭವನ ಲೋಕಾರ್ಪಣೆ ಮಾಡಲಿದ್ದೇವೆ. ಸೆ. 27 ರಂದು ಶನಿವಾರ ಸಂಜೆ 6:30 ರಿಂದ ಪೊಳಲಿ ಶ್ರೀ ಗಿರಿಪ್ರಕಾಶ್ ತಂತ್ರಿಗಳ ನೇತೃತ್ವದಲ್ಲಿ ವೈದಿಕ ವಿಧಿ-ವಿಧಾನ ಸಂಪನ್ನಗೊಂಡು ಸೆ. 28 ರಂದು ಆದಿತ್ಯವಾರ ಮಂಗಳೂರು SCDCC ಬ್ಯಾಂಕಿನ ಅಧ್ಯಕ್ಷ ಡಾ। ಎಮ್. ಎನ್. ರಾಜೇಂದ್ರ ಕುಮಾರ್ ರಿಂದ ಉದ್ಘಾಟನೆಗೊಳ್ಳಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ವಹಿಸಲಿದ್ದು, USA ಉದ್ಯಮಿ ಕೃಷ್ಣಪ್ರಸಾದ್ ಶೆಟ್ಟಿ ಪೇರ್ಲಬೈಲು ದೀಪ ಪ್ರಜ್ವಲನೆ ಮಾಡಿ, ವಿವಿಧ ಸಾಮಾಜಿಕ, ಧಾರ್ಮಿಕ, ರಾಜಕೀಯ, ಕ್ಷೇತ್ರದ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ನೆರವೇರಲಿರುವುದು ಎಂದು ತಿಳಿಸಿದರು. ಸಮಿತಿಯ ಪ್ರಮುಖರಾದ ರವೀಂದ್ರ ಕಂಬಳಿ, ರಾಘವ ಬಂಗೇರ, ಯೋಗೀಶ್ ಕೋಟ್ಯಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.