ಮಂಗಳೂರು, ಸೆ. 26(DaijiworldNews/TA): ನವರಾತ್ರಿ, ನವದೇವಿ ರೂಪಕಗಳ ಪವಿತ್ರ ಪೂಜೆಯ ಮಹತ್ತರ ಆಚರಣೆ. ಒಂಭತ್ತು ದಿನ ನವದೇವಿಯರನ್ನು ಆರಾಧಿಸಲಾಗುತ್ತೆ. ನವರಾತ್ರಿಯ ನಾಲ್ಕನೇ ದಿನ ಕೂಷ್ಮಂಡ ರೂಪದಲ್ಲಿ ದೇವಿಯನ್ನು ಆರಾಧನೆ ಮಾಡಲಾಗುತ್ತೆ. ಈ ಆರಾಧನೆಯ ಹಿಂದೊಂದು ಪ್ರಕಾಶಮಾನವಾದ ಕಥೆ ಇದೆ.
ಸುರಾ ಸಂಪೂರ್ಣ ಕಲಶಂ ರುಧಿರಾಪ್ಲುತಮೇವ ಚ |
ದಧಾನಾ ಹಸ್ತ ಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ||
ಸೂರ್ಯನಿಗೆ ಸಮಾನವಾದ ಕಾಂತಿ, ಪೂಜಿಸಿದರೆ ಯಶಸ್ಸು ಪ್ರಾಪ್ತಿ, ಅಷ್ಟಭುಜದಲ್ಲಿ ಮೆರೆಯೋ ಸಿಂಹವಾಹಿನಿ, ಕೈಗಳಲ್ಲಿ ಶಸ್ತ್ರಾಸ್ತ್ರ ಹಿಡಿದಿರುವ ಆದಿಸ್ವರೂಪಿನಿ. ಹೌದು ನವರಾತ್ರಿಯ ನಾಲ್ಕನೇ ದಿನ ಪೂಜಿಸೋ ಮಾತೆ ಆದಿಶಕ್ತಿಯ ಪ್ರತಿರೂಪವಾದ ಕೂಷ್ಮಾಂಡ ದೇವಿಯ ಚಿತ್ರಣ ಇದು. ಕೂಷ್ಮಾಂಡ ದೇವಿಯ ರೂಪ ವಿಶೇಷವಾಗಿ ಗಮನ ಸೆಳೆಯುತ್ತೆ. ಇವಳು ಸಿಂಹವಾಹಿನಿ. ಸೂರ್ಯನಷ್ಟೇ ಕಾಂತಿ ಹೊಂದಿರುವ ತೇಜೋಮಯಿ. ದೇವಿಗೆ ಎಂಟು ಕೈಗಳು. ತನ್ನ ಕೈಗಳಲ್ಲಿ ಕಮಂಡಲ, ಧನಸ್ಸು, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆಯನ್ನು ಹಿಡಿದಿರುತ್ತಾಳೆ. ವಿಶೇಷ ಅಂದ್ರೆ ಕೂಷ್ಮಾಂಡ ದೇವಿಯ ಪ್ರಭೆಯ ಕಾಂತಿ ಸೂರ್ಯನಿಗೆ ಸಮಾನವಾಗಿರುತ್ತದೆ ಎಂಬುವುದು ಉಲ್ಲೇಖ.
ಕೂಷ್ಮಾಂಡ ಪದದ ಅಂತರಾಳದಲ್ಲೇ ಮಹಾನ್ ಅರ್ಥ ಅಡಗಿದೆ. ಕೂಷ್ಮ ಅಂದ್ರೆ ಉಷ್ಣ , ಅಂಡ ಎಂದರೆ ಬ್ರೂಣ ಎಂದರ್ಥ ಸರಳ ಪದದಲ್ಲಿ ಹೇಳುವುದಾದರೆ ತಪೋಮಂಡಲದ ಸೃಷ್ಟಿ ಕರ್ತೆ ಭೂಮಂಡಲವನ್ನೇ ತನ್ನ ಒಡಲಲ್ಲಿರಿಸಿದ ಮಾತೆ ಎಂದರ್ಥ. ಸಂಸ್ಕೃತದಲ್ಲಿ ಕುಂಬಳಕಾಯಿಯನ್ನು ಕೂಷ್ಮಾಂಡ ಎಂದು ಹೇಳುತ್ತಾರೆ. ಈ ದೇವಿಗೆ ಕುಂಬಳಕಾಯಿ ಅತ್ಯಂತ ಪ್ರಿಯ. ಭಕ್ತರ ಅಜ್ಞಾನವನ್ನೂ ದೂರ ಮಾಡುವ ದೇವಿ ಈಕೆ ಎಂದೂ ನಂಬಲಾಗುತ್ತೆ. ಇಂತಹ ತೇಜೋಮಯಿಯ ಹಿನ್ನೆಲೆ ಬಹು ಕೌತುಕ. ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ ಎಲ್ಲೆಡೆ ಅಂಧಕಾರವೇ ಪಸರಿಸಿತ್ತು. ಆಗ ಇದೇ ದೇವಿಯು ತನ್ನ ತೇಜೋನಗೆಯಿಂದ ಬ್ರಹ್ಮಾಂಡವನ್ನು ಸೃಷ್ಟಿಸುತ್ತಾಳೆ. ಆದ್ದರಿಂದ ಇವಳೇ ಸೃಷ್ಟಿಯ ಆದಿಸ್ವರೂಪ ಶಕ್ತಿಯಾಗಿದ್ದಾಳೆ. ಈಕೆಯು ಸೂರ್ಯನ ಸ್ಥಾನದಲ್ಲಿ ನಿಲ್ಲುವ ಕಾರಣದಿಂದಾಗಿ ಭೂಮಿಯ ಮೇಲಿರುವ ಅಂಧಕಾರವನ್ನೆಲ್ಲಾ ನಿವಾರಣೆ ಮಾಡುತ್ತಾಳೆ ಎಂಬುವುದು ಪ್ರತೀತಿ.
ಕೂಷ್ಮಾಂಡ ದೇವಿಯು ಸೂರ್ಯನಿಗೆ ಅಧಿಪತಿಯಾಗಿರುವ ಕಾರಣ ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಜಾತಕದಲ್ಲಿ ಸೂರ್ಯನಿಂದಾಗುವ ಕೆಡುಕನ್ನು ನಿವಾರಿಸಬಹುದು. ಜೊತೆಗೆ ಎಲ್ಲಾ ರೀತಿಯ ಸಂಕಷ್ಟಗಳೂ ನಿವಾರಣೆಯಾಗುತ್ತದೆ ಎಂದೂ ಹೇಳಲಾಗುತ್ತೆ. ಮಹಾರೂಪ ಕೂಷ್ಮಾಂಡ ದೇವಿ ಮುಕ್ಕಣ್ಣನಿಗೆ ಮಹಾಮಾತೆ, ಸೃಷ್ಟಿಕರ್ತನಿಗೆ ಶಕ್ತಿಮಾತೆ. ವೈಕುಂಠಾಧಿಪತಿಗೂ ಯುಕ್ತಿಮಾತೆ. ಹೌದು ಆದಿದೇವತೆ ಸೃಷ್ಟಿಯ ಪ್ರತೀಕ ಅಂದ್ಮೇಲೆ ಅಲ್ಲಿ ತ್ರಿಮೂರ್ತಿಗಳ ನಂಟು ಇರಲೇ ಬೇಕು. ಖಂಡಿತ, ಮೈರೋಮಂಚಾನಗೊಳ್ಳುತ್ತೆ ಕೇಳಿದ್ರೆ ಭೂಮಂಡಲದ ಸೃಷ್ಟಿದಾತೆಯ ನಂಟಿನ ಕೌತುಕದ ಕಥೆ.
ಆದಿಮಾಯೆ ಮಹಾಕಾಳಿ ಮಹಾಲಕ್ಷ್ಮಿ ಮಹಾ ಸರಸ್ವತಿಯರಿಗೆ ಜನ್ಮ ನೀಡ್ತಾಳೆ. ಅಷ್ಟೆ ಅಲ್ಲದೆ ತನ್ನ ಮೂರು ಕಣ್ನುಗಳ ಪ್ರಕಾಶದಿಂದಲೇ ಅವರಿಗೆ ವರರನ್ನು ಕೂಡಾ ತನ್ನ ಕಣ್ಣುಗಳಿಂದ ನೀಡಿದಳು ಎಂಬ ಉಲ್ಲೇಖವೂ ಇದೆ. ಅಂದ್ರೆ ಬ್ರಹ್ಮ ವಿಷ್ಣು ಮಹೇಶ್ವರ ಮೂವರ ಸೃಷ್ಟಿಗೂ ಕಾರಣ ಕೂಷ್ಮಾಂಡ ದೇವಿ ಎಂಬುವುದು ಗ್ರಂಥಗಳಲ್ಲಿ ಉಲ್ಲೇಖ. ಅಷ್ಟು ಮಾತ್ರವಲ್ಲದೆ ಬ್ರಹ್ಮನ ಕಾರ್ಯ ಸೃಷ್ಟಿ , ಈ ಕಾರ್ಯಕ್ಕೆ ಸ್ಪೂರ್ತಿ ನೀಡೋಳು ಮಹಾತಾಯಿ ಕೂಷ್ಮಾಂಡ ದೇವಿ , ವಿಷ್ಣುವಿನ ಕಾರ್ಯ ರಕ್ಷಣೆ ಮಾಡೋದು. ಈ ಕಾರ್ಯಕ್ಕೆ ಆದಿಮಾಯೆಯೇ ಶಕ್ತಿ. ಇನ್ನು ಈಶ್ವರನ ಕಾರ್ಯ ಲಯ. ಈ ಕಾಯಕಕ್ಕೂ ದೇವಿಯೇ ಮಹಾಶಕ್ತಿ ಅನ್ನೋದು ಐತಿಹ್ಯ. ನಾವು ನವರಾತ್ರಿ ಸಮಯದಲ್ಲಿ ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಪೂಜಿಸುವ ವ್ಯಕ್ತಿ ಸಂತೋಷ, ಸಮೃದ್ಧಿ ಮತ್ತು ಪ್ರಗತಿಯನ್ನು ಪಡೆಯುತ್ತಾನೆ ಎನ್ನುವುದು ನಂಬಿಕೆ. ಪುರಾಣದಲ್ಲೊಂದು ಕಥೆ ಆಯಾಯ ಊರಿಗೆ ಅನುಸಾರವಾಗಿ ಅನೇಕ ಕಥೆಗಳು. ಇದು ಇತಿಹಾಸದ ಸೌಂದರ್ಯದ ಮೆಲುಕು.