ಸುಳ್ಯ : ಸೆ. 26(DaijiworldNews/TA): ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾದ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನಲ್ಲಿನ ಸೊತ್ತುಗಳನ್ನು ಅಲ್ಲಿನ ಗುಮಾಸ್ತನೇ ಕಳವು ಮಾಡಿದ್ದರೂ ಆತನ ವಿರುದ್ಧ ಪಂಚಾಯತ್ ಸೂಕ್ತ ಕ್ರಮ ಜರುಗಿಸಿಲ್ಲ, ಪಂಚಾಯತ್ ಸಿಸಿ ಟಿವಿ ಅಳವಡಿಸಿ ಜನರ ಖಾಸಗಿ ವಿಡಿಯೋಗಳನ್ನು ಸೆರೆಹಿಡಿದು ಅದನ್ನು ವಾಟ್ಸ್ಯಾಪ್ ನಲ್ಲಿ ಹರಿಯಬಿಡಲಾಗುತ್ತದೆ ಎಂದು ಆರೋಪಿಸಿದ ಗ್ರಾಮಸ್ಥರು ಸೆ.25ರಂದು ಪಂಚಾಯತ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.




ಗ್ರಾಮ ಪಂಚಾಯತ್ ಗೆ ಸಂಬಂಧಪಟ್ಟ ಸಿಸಿ ಟಿವಿ ಪರಿಕರ, ಸೌಂಡ್ ಸಿಸ್ಟಮ್ ಗಳನ್ನು ಖಾಸಗಿ ವ್ಯಕ್ತಿಗಳು ಬಳಸುತ್ತಿದ್ದಾರೆ. ಪಂಚಾಯತ್ ಸೊತ್ತುಗಳನ್ನು ಯಾರು ಕದ್ದಿದ್ದು, ಸಿಸಿ ಟಿವಿಯ ಫುಟೇಜ್ಗಳನ್ನು ವಾಟ್ಸ್ಯಾಪ್ ನಲ್ಲಿ ಹಾಕಿ ಸಾರ್ವಜನಿಕರ ಖಾಸಗಿತನಕ್ಕೆ ಧಕ್ಕೆ ತರಲಾಗಿದೆ. ಇದರ ಹಿಂದಿರುವರು ಯಾರು? ಈ ಬಗ್ಗೆ ಪಿಡಿಓ ಮಾಹಿತಿ ನೀಡಬೇಕೆಂದು ಆಗ್ರಹಿಸಿದರು. ಪಿಡಿಓ ಚಿನ್ನಪ್ಪ ನಾಯ್ಕ್ ಅವರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಪಂಚಾಯತ್ ಗುಮಾಸ್ತ ಸಂತೋಷ್ ಪಂಚಾಯತ್ ಸೊತ್ತುಗಳನ್ನು ಕಳವು ಮಾಡಿದ್ದಾನೆ.
ಇದರ ಹಿಂದೆ ಪಂಚಾಯತ್ ಉಪಾಧ್ಯಕ್ಷ ಸಾಥ್ ನೀಡಿದ್ದಾರೆ. ಪಂಚಾಯತ್ ಅಧ್ಯಕ್ಷೆ ಈ ಬಗ್ಗೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು. ಗ್ರಾಮಸ್ಥರಾದ ಉದಯ ಶಿವಾಲ ಸುಧಾಮಣಿ, ಹರಿಪ್ರಸಾದ್, ಗಿರೀಶ ತಂಬಿನಡ್ಕ,ಸತೀಶ ಚಾಳೆಪ್ಪಾಡಿ, ದಿನೇಶ ಮಡ್ತಿಲ, ಶೇಖರ ಅಂಬೆಕಲ್ಲು, ಸತೀಶ್ ಟಿ.ಎನ್, ಮಣಿಕಂಠ ಕೊಳಗೆ, ಸಚಿತ್ ಶಿವಾಲ, ನಂದ ಬಿಳಿಮಲೆ, ವೀಣಾನಂದ ಬಿಳಿಮಲೆ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.