ಉಡುಪಿ, ಸೆ. 27 (DaijiworldNews/AA): ಬೆಳಗಿನ ಜಾವ 10ರಿಂದ 11 ಗಂಟೆಯ ನಡುವೆ ರೌಡಿಶೀಟರ್ ಸೈಫುದ್ದೀನ್ ಕೊಲೆ ನಡೆದಿದ್ದು, ಮೂವರು ದುಷ್ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ ಎಂದು ಉಡುಪಿ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.




ಈ ಬಗ್ಗೆ ಮಲ್ಪೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಉಡುಪಿಯ ಕೊಡುವೂರು ಸಾಲ್ಮರದಲ್ಲಿ ಸೈಫ್ ಕೊಲೆ ನಡೆದಿದೆ. ಸೈಫ್ ಮೇಲೆ 18 ಕ್ರಿಮಿನಲ್ ಕೇಸ್ ಗಳಿವೆ. ಆತ ಹಿರಿಯಡ್ಕ ಠಾಣೆ ಮತ್ತು ಉಡುಪಿ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಸೈಫ್ ಎರಡು ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ" ಎಂದು ಮಾಹಿತಿ ನೀಡಿದ್ದಾರೆ.
"ಮೂರು ಜನ ಆರೋಪಿಗಳು ಏಕಕಾಲದಲ್ಲಿ ಅಟ್ಯಾಕ್ ಮಾಡಿದ್ದಾರೆ. ಆರೋಪಿಗಳು ಎಕೆಎಂಎಸ್ ಖಾಸಗಿ ಬಸ್ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿದ್ದಾರೆ. ಕೊಲೆಗೆ ಕಾರಣ ಮತ್ತು ಆರೋಪಿಗಳ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಕೊಲೆಗೆ ನಿಖರ ಕಾರಣ ತನಿಖೆಯಿಂದ ಬಹಿರಂಗವಾಗುತ್ತದೆ. ಚಾಕು ಮತ್ತು ತಲ್ವಾರ್ ನಿಂದ ದಾಳಿ ಮಾಡಿದ್ದಾರೆ" ಎಂದು ಹೇಳಿದ್ದಾರೆ.
"ಸೊಕೋ ಟೀಮ್ ಇನ್ನಷ್ಟೇ ಸ್ಥಳಕ್ಕೆ ಭೇಟಿ ನೀಡಬೇಕಿದೆ. ದೇಹದ ಹಲವೆಡೆ ಇರಿದ ಗಾಯಗಳಿವೆ. ಮಲ್ಪೆಯ ಮನೆಯಲ್ಲಿ ಒಬ್ಬರೇ ಇದ್ದಾಗ ಅಟ್ಯಾಕ್ ಆಗಿದೆ. ವಾಸದ ಮನೆ ಮಣಿಪಾಲ ಭಾಗದಲ್ಲಿದೆ. ಹಿಂದಿನ ಮರ್ಡರ್ ಗಳಿಗೆ ಪ್ರತಿಕಾರನಾ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ" ಎಂದರು.