ಉಳ್ಳಾಲ, 28 (DaijiworldNews/TA): ಕುತ್ತಾರ್ ನಲ್ಲಿರುವ ಕೊರಗ ತನಿಯ ಕ್ಷೇತ್ರಕ್ಕೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸುವುದರಿಂದ ಮೂಲ ಸೌಕರ್ಯ ಕಲ್ಪಿಸುವುದು ನಮ್ಮ ಜವಾಬ್ದಾರಿ, ಈ ನಿಟ್ಟಿನಲ್ಲಿ ಇಲ್ಲಿನ ರಸ್ತೆ ಅಭಿವೃದ್ಧಿ ಅಗತ್ಯವಾಗಿದ್ದು ಸ್ಥಳೀಯರು ಜಾಗ ಬಿಟ್ಟುಕೊಟ್ಟರೆ ಕಾಮಗಾರಿಗೆ ಮೂರುವರೆ ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.

ಮುನ್ನೂರು ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಶನಿವಾರ ಕುತ್ತಾರ್ ಕೊರಗತನಿಯ ಆದಿಸ್ಥಳದ ಬಳಿ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದರು. ಇತಿಹಾಸ ಪ್ರಸಿದ್ಧ ಕೊರಗ ತನಿಯ ಕ್ಷೇತ್ರ, ಅಂಬ್ಲಮೊಗರು ದರ್ಗಾ ಹೀಗೆ ವಿವಿಧ ಕ್ಷೇತ್ರಗಳಿಗೆ ಜನರು ಬರುವ ಸೌಹಾರ್ದ ಪ್ರದೇಶ ಇದಾಗಿದ್ದು ವಿವಿಧ ರೀತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಒಂದೂವರೆ ಕೋಟಿ ಅನುದಾನ ಮೀಸಲಿಡಲಾಗಿದೆ, ಪ್ರಸ್ತುತ ರಸ್ತೆ ಅಭಿವೃದ್ಧಿಗೆ ಸಾಂಕೇತಿಕ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೆಹನಾ ಬಾನು, ಪಂಜಂದಾಯ ಬಂಟ ವೈದ್ಯನಾಥ ಟ್ರಸ್ಟ್ ಉಪಾಧ್ಯಕ್ಷ ಮಹಾಬಲ ಹೆಗ್ಡೆ ದೆಬ್ಬೇಲಿ, ಪಂಚಾಯತ್ ಉಪಾಧ್ಯಕ್ಷ ಮಹಾಬಲ ಟಿ. ದೆಪ್ಪೆಲಿಮ್ಮಾರ್, ದೈವಪಾತ್ರಿ ಮಾಯಿಲ ರಾಣಿಪುರ , ಪಂ. ಸದಸ್ಯರುಗಳಾದ ಮುಸ್ತಫಾ, ಮಾಜಿ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ನವೀನ್ ಡಿಸೋಜ, ಸಿರಾಜ್ ಮದನಿನಗರ, ಹಸನಬ್ಬ ಸಂತೋಷ್ನಗರ, ಪುಷ್ಪಾ ಅಂಚನ್, ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್ ಸಿಂಪಿಗೇರ, ಭಾಸ್ಕರ್ ಕುತ್ತಾರ್, ದೇವಿಪ್ರಸಾದ್ ಶೆಟ್ಟಿ, ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ, ಗುತ್ತಿಗೆದಾರ ಅಬ್ದುಲ್ ರಹಿಮಾನ್ ಸ್ಥಳೀಯರು ಉಪಸ್ಥಿತರಿದ್ದರು.