ಸುಳ್ಯ, 28 (DaijiworldNews/TA): ಗಾಂಧಿ ಚಿಂತನಾ ವೇದಿಕೆ ವತಿಯಿಂದ ಅ. 2 ರಂದು ಸುಳ್ಯದಲ್ಲಿ ಗಾಂಧಿನಡಿಗೆ ನಡೆಯಲಿದ್ದು ಆ ಸಂದರ್ಭ ಸಹಕಾರ ರತ್ನ ಸವಣೂರು ಸೀತಾರಾಮ ರೈ ಯವರಿಗೆ ರಾಜ್ಯ ಮಟ್ಟದ ಗಾಂಧಿ ಸ್ಮೃತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಗಾಂಧಿ ಚಿಂತನಾ ವೇದಿಕೆಯ ಪದಾಧಿಕಾರಿಗಳು ಸೆ. 27 ಸುಳ್ಯದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ವೇದಿಕೆಯ ಪ್ರಧಾನ ಸಂಚಾಲಕರಾದ ಹಿರಿಯ ಪತ್ರಕರ್ತ ಹರೀಶ್ ಬಂಟ್ವಾಳ್ ರವರು ಮಾತನಾಡಿ ” ವರ್ಷಂಪ್ರತಿ ವೇದಿಕೆ ವತಿಯಿಂದ ಅಕ್ಟೋಬರ್ 2 ರಂದು ಆಚರಿಸಿಕೊಂಡು ಬರುತ್ತಿರುವ ಗಾಂಧಿ ನಡಿಗೆ ಕಾರ್ಯಕ್ರಮ ಈ ಬಾರಿ ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದೇವೆ ಎಂದರು. ವೇದಿಕೆಯ ಸಂಚಾಲಕರಾದ ಡಾ.ಸುಂದರ ಕೇನಾಜೆಯವರು ಮಾತನಾಡಿ ” ಗಾಂಧೀಜಿಯ ಚಿಂತನೆಗಳನ್ನು ಮತ್ತು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಿರಿಯರನ್ನು ಗೌರವಿಸಿ ಪ್ರಶಸ್ತಿ ನೀಡುವ ಕಾರ್ಯಕ್ರಮ ಈ ಬಾರಿ ವೇದಿಕೆಯ ವತಿಯಿಂದ ನಡೆಯಲಿದೆ.
ಗಾಂಧೀಜಿಯವರ ಸರಳತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವಂತಹ ಸರಳ ಸಜ್ಜನಿಕೆಯ ವ್ಯಕ್ತಿ ಸವಣೂರು ಸೀತಾರಾಮರ ರೈಯವರ ಸಾಧನೆಯ ಹಾದಿಯನ್ನು ಗೌರವಿಸಿ ಅವರಿಗೆ ಗಾಂಧಿ ಸ್ಮೃತಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು" ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಸಂಚಾಲಕರುಗಳಾದ ದಿನೇಶ್ ಮಡಪ್ಪಾಡಿ, ಚಂದ್ರಶೇಖರ ಪೇರಾಲು ಶಂಕರ್ ಪೆರಾಜೆ ಉಪಸ್ಥಿತರಿದ್ದರು.