ಕುಂದಾಪುರ, ಸೆ. 28 (DaijiworldNews/AA): ನಾಪತ್ತೆಯಾಗಿದ್ದ ಹರಿಯಾಣ ಮೂಲದ ಯುವಕನೊಬ್ಬ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಾಸಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರ ಸಹಾಯದೊಂದಿಗೆ ಗಂಗೊಳ್ಳಿ ಪೊಲೀಸರು ಆತನನ್ನು ಪೋಷಕರಿಗೆ ಒಪ್ಪಿಸಿದ್ದಾರೆ.

ಹರಿಯಾಣದ ಯಮುನಾ ನಗರ ನಿವಾಸಿ, ಶಿವಂ (22) ಎಂಬ ಯುವಕ ಇತ್ತೀಚೆಗೆ ಮನೆಯಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಶಿವA ಪ್ರಯಾಣಿಸುತ್ತಿದ್ದ ರೈಲಿನಲ್ಲಿ ತ್ರಾಸಿಯ ಕೆಲವು ಯುವಕರು ಸಹ ಪ್ರಯಾಣಿಸುತ್ತಿದ್ದರು. ಈ ಯುವಕರು ಶಿವಂನನ್ನು ಗುರುತಿಸಿ, ಆತನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಖಚಿತಪಡಿಸಿಕೊಂಡ ನಂತರ ಗಂಗೊಳ್ಳಿ ಪಿಎಸ್ಐ ಪವನ್ ನಾಯಕ್, ಕ್ರೈಂ ಪಿಎಸ್ಐ ಸುನಿಲ್, ಹೆಡ್ ಕಾನ್ಸ್ಟೆಬಲ್ ಚಂದ್ರ ಮತ್ತು ಇತರೆ ಸಿಬ್ಬಂದಿ ಯುವಕನನ್ನು ಪತ್ತೆ ಹಚ್ಚಿ ಆತನ ಪೋಷಕರನ್ನು ಸಂಪರ್ಕಿಸಿದ್ದಾರೆ.
ಗಂಗೊಳ್ಳಿ ಪೊಲೀಸರ ಸಹಕಾರದೊಂದಿಗೆ ಶಿವಂ ಪೋಷಕರು ಹರಿಯಾಣದಿಂದ ಮಂಗಳೂರಿಗೆ ವಿಮಾನದಲ್ಲಿ ಬಂದು, ನಂತರ ಗಂಗೊಳ್ಳಿ ಠಾಣೆಗೆ ಆಗಮಿಸಿದರು. ಅಲ್ಲಿ ಯುವಕನನ್ನು ಅವರ ಪೋಷಕರಿಗೆ ಒಪ್ಪಿಸಲಾಯಿತು.
ತಮ್ಮ ಮಗನನ್ನು ಪತ್ತೆ ಹಚ್ಚುವಲ್ಲಿ ಸಮಯೋಚಿತವಾಗಿ ಕಾರ್ಯ ನಿರ್ವಹಿಸಿದ ಪೊಲೀಸರಿಗೆ ಮತ್ತು ಸಾರ್ವಜನಿಕರಿಗೆ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.