ಮಂಗಳೂರು, ಸೆ. 28 (DaijiworldNews/AA): ಕೆಲ ಕಾಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಡುವು ಪಡೆದಿದ್ದ ಮಳೆ ಶನಿವಾರ ಮತ್ತೆ ಬಿರುಸುಗೊಂಡಿತ್ತು. ಗ್ರಾಮೀಣ ಭಾಗಗಳಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಯಿಂದಾಗಿ ಹಲವು ಮರಗಳು ಧರೆಗೆ ಉರುಳಿದ್ದು, ಬೆಳೆಗಳಿಗೆ ಹಾನಿಯಾಗಿದೆ. ಸುಳ್ಯ ತಾಲೂಕಿನ ಕೆಲ ಭಾಗಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗಿದ್ದು, ಹಲವೆಡೆ ನವರಾತ್ರಿ ಆಚರಣೆಗಳಿಗೆ ಅಡಚಣೆಯಾಗಿದೆ.

ಭಾರತೀಯ ಹವಾಮಾನ ಇಲಾಖೆ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ. ಭಾನುವಾರದಂದು ರಾಜ್ಯದ ಕರಾವಳಿಯುದ್ದಕ್ಕೂ ಗಾಳಿಯ ವೇಗ ಗಂಟೆಗೆ 50-60 ಕಿ.ಮೀ. ತಲುಪುವ ಸಾಧ್ಯತೆ ಇದೆ. ಸೆಪ್ಟೆಂಬರ್ 28ರವರೆಗೆ ಅರಬ್ಬಿ ಸಮುದ್ರವು ಭಾರೀ ಮಳೆ ಮತ್ತು ಬಿರುಗಾಳಿಯಿಂದಾಗಿ ಪ್ರಕ್ಷುಬ್ಧವಾಗಿರಲಿದೆ ಎಂದು ಐಎಂಡಿ ತಿಳಿಸಿದೆ.
ಮಂಗಳೂರು ನಗರ ಮತ್ತು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ಮಧ್ಯಾಹ್ನದಿಂದ ರಾತ್ರಿಯವರೆಗೆ ಭಾರಿ ಸಂಚಾರ ದಟ್ಟಣೆ (ಟ್ರಾಫಿಕ್ ಜಾಮ್) ಉಂಟಾಗಿತ್ತು. ವಾರದ ಹಿಂದೆ ಹೆದ್ದಾರಿಯ ಮೇಲೆ ಹಾಕಿದ್ದ ತೇಪೆ ಕಿತ್ತುಹೋಗಿ ಮತ್ತೆ ಗುಂಡಿಗಳು ಕಾಣಿಸಿಕೊಂಡಿದ್ದರಿಂದ ವಾಹನಗಳು ನಿಧಾನವಾಗಿ ಚಲಿಸುವ ಪರಿಸ್ಥಿತಿ ಎದುರಾಗಿತ್ತು. ಮಳೆಯ ಜೊತೆಗೆ ಮಂಗಳೂರು ದಸರಾ ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಜನರು ಆಗಮಿಸಿದ್ದರಿಂದ ನಗರದೊಳಗೆ ಸಂಚಾರ ಅಸ್ತವ್ಯಸ್ತಗೊಂಡಿತು.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ
ಒಡಿಶಾ ಕರಾವಳಿಯ ಸಮೀಪ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರ ಪರಿಣಾಮವಾಗಿ ಮಳೆಯು ಬಿರುಸುಗೊಂಡಿದೆ. ಮುಂದಿನ ಒಂದು ವಾರದವರೆಗೆ ಕರ್ನಾಟಕದಾದ್ಯಂತ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.