ಮಂಗಳೂರು, 28 (DaijiworldNews/TA): ಒಂಭತ್ತು ದೇವಿ ರೂಪಕಗಳ ಪವಿತ್ರ ಪೂಜೆಯ ಮಹತ್ತರ ಆಚರಣೆಯೇ ನವರಾತ್ರಿ. ನಾಡಿನೆಲ್ಲೆಡೆ ವಿಜಯದ ಸಂಕೇತವಾಗಿ ವಿಜೃಂಭಣೆಯಿಂದ ದಸರಾ ಆಚರಿಸಲಾಗುತ್ತೆ. ಒಂದೊಂದು ದಿನ ಒಂದೊಂದು ಅವತಾರದ ದೇವಿಯ ಬನ್ನಣೆಗೆ ಪದಗಳೇ ಪುಷ್ಪಗಳಾಗುತ್ತೆ. ಇಂದು ನವರಾತ್ರಿಯ ಏಳನೇ ದಿನ ಕಾಳರಾತ್ರಿ ರೂಪದಲ್ಲಿ ದೇವಿಯನ್ನು ಆರಾಧನೆ ಮಾಡಲಾಗುತ್ತೆ. ಈ ಆರಾಧನೆಯ ಹಿಂದೊಂದು ಕರಾಳ ರಕ್ಕಸರ ವಧೆಯ ಕಥೆ ಇದೆ.
ಏಕವೇಣೀ ಜಪಾಕರ್ಣಪೂರ ನಗ್ನಾ ಖರಾಸ್ಥಿತಾ |
ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತ ಶರೀರಿಣೀ ||
ವಾಮಪಾದೋಲ್ಲಸಲ್ಲೋ ಹಲತಾ ಕಂಟಕ ಭೂಷಣಾ |
ವರ್ಧನ ಮೂರ್ಧ್ವಜಾ ಕೃಷ್ಣಾ ಕಾಳರಾತ್ರಿ ಭಯಂಕರೀ ||
ಕೊರಳಲ್ಲಿ ರುಂಡ ಮಾಲೆ , ಬಾಯಲ್ಲಿ ಉರಿಯುವ ಬೆಂಕಿ ಜ್ವಾಲೆ, ಕರ್ಗತ್ತಲನ್ನು ಕಂಪಿಸೋ ಘೋರ ಕಪ್ಪು ಮೈಬಣ್ಣ, ಮುಕ್ಕೋಟಿ ದೃಷ್ಟಿಯ ಮೂರು ಭಯಾನಕ ನಯನ, ಕತ್ತೆಯೇ ವಾಹನ. ನಾಲ್ಕು ಕೈಗಳಲ್ಲಿ ಬಲಗೈಗಳು ಅಭಯ ಮತ್ತು ವರದ ಮುದ್ರೆಯಲ್ಲಿದ್ರೆ , ಎಡಗೈಗಳು ಕತ್ತಿ ಮತ್ತು ಕಬ್ಬಿಣದ ಕೊಕ್ಕೆಯ ಆಯುಧಗಳಿಂದ ವಿರಾಜಿಸೋ ಹರಡಿರುವ ಕೇಶರಾಶಿಯ ದೇವಿಯೇ ಕಾಳರಾತ್ರಿ ರೂಪದ ದೈವಿಕ.
ದುರ್ಗಾ ದೇವಿಯ 7ನೇ ರೂಪವಾದ ಕಾಳರಾತ್ರಿಯ ಹೆಸರಿಗೊಂದು ಹಿನ್ನೆಲೆ ಇದೆ. ಕಾಳ ಅಂದ್ರೆ ಕತ್ತಲು, ಕಡುಗಪ್ಪು ಎಂದು ಸೂಚಿಸಲಾಗುತ್ತೆ. ಕಾಳ ರಾತ್ರಿ ಅಂದ್ರೆ ತಮೋಗುಣ, ಸಾವಿನ ರಾತ್ರಿ ಎಂದೂ ಹೇಳಲಾಗುತ್ತೆ. ದಂತಕಥೆಯ ಪ್ರಕಾರ, ರಾಕ್ಷಸರಾದ ಶುಂಭ-ನಿಶುಂಭ ಮತ್ತು ರಕ್ತಬೀಜಾಸುರರು ಮೂರು ಲೋಕಗಳಲ್ಲಿ ತಮ್ಮ ಭಯವನ್ನು ಸೃಷ್ಟಿಸಲು ಮುಂದಾಗ್ತಾನೆ. ಇದರಿಂದ ಆತಂಕಗೊಂಡ ದೇವತೆಗಳೆಲ್ಲ ಶಿವನ ಮೊರೆ ಹೋಗ್ತಾರೆ. ರಾಕ್ಷಸರನ್ನು ಸಂಹರಿಸಿ ತನ್ನ ಭಕ್ತರನ್ನು ರಕ್ಷಿಸುವಂತೆ ಶಿವನು ಪಾರ್ವತಿಯನ್ನು ಕೇಳ್ತಾನೆ. ಶಿವನ ಸಲಹೆಯಂತೆ ಪಾರ್ವತಿಯು ದುರ್ಗೆಯ ರೂಪವನ್ನು ತೆಗೆದುಕೊಂಡು ಶುಂಭ-ನಿಶುಂಭರನ್ನು ಸಂಹಾರ ಮಾಡುತ್ತಾಳೆ ಎನ್ನುವುದು ಉಲ್ಲೇಖ.
ರಕ್ಕಸರ ವಧಿಸೋದಕ್ಕೆ ಕೌಶಿಕೆಯ ಕಾಳರಾತ್ರಿ ಅವತಾರ. ಜಗಜ್ಜನನಿಯ ಕ್ರೋಧ ಜ್ವಾಲೆಗೆ ದಂಗಾಗಿ ಹೋದ ರಕ್ತಬೀಜಾಸುರ. ಪುರಾಣದಲ್ಲೊಂದು ಫ್ರಫುಲ್ಲ ಕಥೆ ಇಂದಿಗೂ ಅಜರಾಮರ. ಹೌದು ರಕ್ತಬೀಜಾಸುರ ಶುಂಬ ಭನಿಶುಂಭರ ವಧೆ ಮಾಡುವ ಸಲುವಾಗಿ ತಾಯಿಯ ವಿಭಿನ್ನ ಸ್ವರೂಪದ ಅಗತ್ಯತೆ ದುರ್ಗಾಮಾತೆಗೆ ತಿಳಿದಿರುತ್ತೆ. ದೇವಾದಿ ದೇವತೆಗಳ ಕೋರಿಕೆಯ ಮೇರೆಗೆ ತಾಯಿ ಕೌಶಿಕಿ ರೂಪ ತಾಳುತ್ತಾಳೆ ಈ ರೂಪವೂ ಕೂಡಾ ಕಾಲರಾತ್ರಿಯಂತೆ ಬಹಳ ಘೋರವಾಗಿರುತ್ತೆ. ಆದ್ರೆ ಕೌಶಿಕೆ ಒಬ್ಬಳೇ ರಕ್ಕಸರನ್ನು ಕೊಲ್ಲುವುದು ಅಸಾಧ್ಯ ಅನ್ನೋ ಕಾರಣದಿಂದ ತನ್ನ ಕಣ್ಣುಗಳಿಂದ ಕಾಳರಾತ್ರಿ ಎಂಬ ಇನ್ನೊಂದು ಶಕ್ತಿಯನ್ನು ಸೃಷ್ಟಿ ಮಾಡುತ್ತಾಳೆ. ಅವಳೇ ಕಾಳ ರಾತ್ರಿ.
ದುರ್ಗಾ ದೇವಿಯು ರಕ್ತಬೀಜಾಸುರರನ್ನು ಕೊಂದಾಗ ಕಾಳರಾತ್ರಿಯು ಆತನ ದೇಹದಿಂದ ಹೊರಬರುತ್ತಿದ್ದ ರಕ್ತವನ್ನು ತನ್ನ ಬಾಯಿಯಲ್ಲಿ ತುಂಬಿಕೊಂಡು ರಕ್ತಬೀಜಾಸುರನನ್ನು ಸೀಳಿ ಕೊಂದಳು ಹೀಗೆ ರಕ್ತ ಬೀಜಾಸುರನ ಅಂತ್ಯ ಕಾಳರಾತ್ರಿಯಿಂದಾಗಿದೆ ಎಂಬುವುದು ಪ್ರತೀತಿ. ದೇವಿಯನ್ನು ತಾಯಿಯಂತೆ ಕಂಡು ಆರಾಧನೆ ಮಾಡಿದಲ್ಲಿ ಎಲ್ಲ ಪಾಪ ವಿನಾಶವಾಗುತ್ತದೆ, ಶತ್ರುಗಳು ಇಲ್ಲದಂತಾಗುತ್ತಾರೆ, ಪಾಪದಿಂದ ಮುಕ್ತರಾಗುತ್ತೀರಿ ಎಂಬುವುದು ನಂಬಿಕೆ. ಪುರಾಣದಲ್ಲೊಂದು ಕಥೆ ಆಯಾಯ ಊರಿಗೆ ಅನುಸಾರವಾಗಿ ಅನೇಕ ಕಥೆಗಳು. ಇದು ಇತಿಹಾಸದ, ಪುರಾಣದ ಸೌಂದರ್ಯದ ಮೆಲುಕು.