ಪುತ್ತೂರು,ಅ. 08 (DaijiworldNews/AK): ಪುತ್ತೂರು: ಕೆಲ ತಿಂಗಳ ಹಿಂದೆ ಪುತ್ತೂರು ತಾಲೂಕಿನ ಮುರ ಎಂಬಲ್ಲಿನ ತಿರುವಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಕೆದಿಲ ನಿವಾಸಿ ಅಪೂರ್ವ ಕೆ. ಭಟ್ (32) ಚಿಕಿತ್ಸೆ ಫಲಿಸದೆ ಮಂಗಳವಾರ ರಾತ್ರಿ ನಿಧನರಾದರು.

ಮೇ 27ರಂದು ಪುತ್ತೂರಿನ ಹೊರವಲಯದ ಮುರ ಜಂಕ್ಷನ್ ಬಳಿ ಈ ದುರ್ಘಟನೆ ನಡೆದಿತ್ತು. ಮಾಣಿ-ಮೈಸೂರು ಹೆದ್ದಾರಿಯಲ್ಲಿ ಪುತ್ತೂರು ಪೇಟೆಯಿಂದ ತಮ್ಮ ತಂದೆ ಈಶ್ವರ್ ಭಟ್ ಅವರ ಜತೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ, ಪಡ್ನರಿಗೆ ತಿರುಗುವ ಒಳರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಪುತ್ತೂರಿನಿಂದ ಮಂಗಳೂರಿನತ್ತ ವೇಗವಾಗಿ ಚಲಿಸುತ್ತಿದ್ದ ಖಾಸಗಿ ಬಸ್, ಅಪೂರ್ವ ಅವರ ತಂದೆ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ಕಾರು ಹಲವು ಮೀಟರ್ ದೂರಕ್ಕೆ ಎಸೆಯಲ್ಪಟ್ಟು ನುಜ್ಜುಗುಜ್ಜಾಗಿತ್ತು.
ಅಪಘಾತದಲ್ಲಿ ಅಪೂರ್ವ, ಅವರ ತಂದೆ ಈಶ್ವರ್ ಭಟ್ ಮತ್ತು ಅಪೂರ್ವ ಅವರ ಪುಟ್ಟ ಮಗಳು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದರು. ಅಪೂರ್ವ ಅವರ ಸ್ಥಿತಿ ಗಂಭೀರವಾಗಿತ್ತು. 134 ದಿನಗಳ ಕಾಲ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.