ಮಂಗಳೂರು, ಅ. 08 (DaijiworldNews/AK):ಭೂಮಿಯಿಂದ ಬಾಹ್ಯಕಾಶದಲ್ಲಿ ಸ್ಯಾಟ್ ಲೈಟ್ ನಿಯಂತ್ರಣ ಹೇಗೇ ಸಾಧ್ಯವಾಗುತ್ತದೆಯೋ ಅದೇ ಪ್ರಕಾರವಾಗಿ ರೋಬೋಟಿಕ್ ಸರ್ಜರಿ ಆವಿಷ್ಕಾರ ಹಾಗೂ ಬೆಳವಣಿಗೆಗೆ ಪೂರಕವಾಯಿತು ಎಂದು ಕೊಯಮತ್ತೂರಿನ ಎಂ. ಜಿ. ಆರ್. ವಿ.ವಿ.ಯ ಖ್ಯಾತ ರೋಬೋಟಿಕ್ ಸರ್ಜನ್, ಕೆ. ಎಸ್. ಹೆಗ್ಡೆ ಮೆಡಿಕಲ್ ಕಾಲೇಜಿನ ಮೊದಲ ಬ್ಯಾಚ್ ವಿದ್ಯಾರ್ಥಿ ಡಾ. ಹರೀಶ್ ಬಿ. ಕಕ್ಕಿಲ್ಲಾಯ ಹೇಳಿದರು.

ದೇರಳಕಟ್ಟೆಯ ನಿಟ್ಟೆ ವಿ.ವಿ.ಯ ಎ. ಬಿ. ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಮಹಾ ವಿದ್ಯಾಲಯದ ಆವಿಷ್ಕಾರ ಸಭಾಂಗಣದಲ್ಲಿ ನಡೆದ ಡಾ. ಅಮರಾನಾಥ್ ಹೆಗ್ಡೆ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಕಳೆದ ಕೆಲವು ದಶಕಗಳಿಂದ ರೋಬೋಟಿಕ್ ತಂತ್ರಜ್ಞಾನದಲ್ಲಿ ಆವಿಷ್ಕಾರವಾಗುತ್ತಿದ್ದು ಭವಿಷ್ಯದಲ್ಲಿ ರೋಬೋಟಿಕ್ ಸರ್ಜರಿಯಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪ್ರಭಾವ ಬೀರಲಿದ್ದು ನಂಬಲಸಾಧ್ಯ ತಂತ್ರಜ್ಞಾನ ಮೂಡಿ ಬರಲಿದೆ ಎಂದರು.
ಸಹ ಕುಲಾಧಿಪತಿ ಡಾ. ಎಂ. ಶಾಂತಾರಾಮ ಶೆಟ್ಟಿ ಮಾತನಾಡಿ, ಡಾ. ಅಮರನಾಥ ಶೆಟ್ಟಿ ಹಾಗೂ ತಮ್ಮ ಕಾಲೇಜು ದಿನ, ವೃತ್ತಿಪರ ದಿನಗಳ ಬಾಂಧವ್ಯ ಸ್ಮರಿಸಿ ಹೆಗ್ಡೆ ಯವರು ಯುನೈಟೆಡ್ ಕಿಂಗ್ಡಮ್ ನಲ್ಲಿ ಉನ್ನತ ವ್ಯಾಸಂಗ ಪಡೆದು ಬಂದರೂ ತಾಯಿನಾಡಿನ ಮೇಲಿನ ಅತೀವ ಬಂಧ ಮತ್ತೆ ವಿದೇಶಕ್ಕೆ ಹೋಗದಂತೆ ಮಾಡಿದ್ದು ಇಲ್ಲೇ ಸೇವೆ ಮಾಡುವ ಮೂಲಕ ಅವರು ವೈದ್ಯಕೀಯ ರಂಗದ ಅವಿಸ್ಮರಣೀಯ ವ್ಯಕ್ತಿತ್ವವಾಗಿ ಕಾಣುತ್ತಾರೆ ಎಂದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕುಲಪತಿ ಡಾ. ಎಂ. ಎಸ್. ಮೂಡಿತ್ತಾಯ, ಕುಲಸಚಿವ ಹರ್ಷ ಹಾಲಹಳ್ಳಿ, ಡಾ. ಸತೀಶ್ ಕುಮಾರ್ ಭಂಡಾರಿ, ಡಾ. ಜಯಪ್ರಕಾಶ್ ಶೆಟ್ಟಿ, ಡಾ. ಸುಧೀಂದ್ರ ಹಾಗೂ ಡಾ. ವಿದ್ಯಾ ಉಪಸ್ಥಿತರಿದ್ದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಡಾ. ಹರೀಶ್ ಬಿ. ಕಕ್ಕಿಲ್ಲಾಯ ಅವರನ್ನು ಸನ್ಮಾನಿಸಲಾಯಿತು.