ಉಳ್ಳಾಲ, ಅ. 08 (DaijiworldNews/TA): ಇತ್ತೀಚೆಗೆ ನಡೆದ ಶಾರಾದೋತ್ಸವ ಮೆರವಣಿಗೆಗೆ ಪೊಲೀಸರಿಂದಲೇ ಅಡ್ಡಿಯಾಗಿದೆ. ವ್ಯವಸ್ಥಿತವಾಗಿ ಜರಗುವ ಉಳ್ಳಾಲ ಶಾರದೋತ್ಸವಕ್ಕೆ ಜಿಲ್ಲೆಯಲ್ಲೇ ಕಪ್ಪು ಚುಕ್ಕೆಯನ್ನು ತರುವ ಕೆಲಸ ಪೊಲೀಸ್ ಅಧಿಕಾರಿಗಳಿಂದ ಆಗಿದೆ. ಉಳ್ಳಾಲ ದಲ್ಲಿ ಶಾರಾದೋತ್ಸವ ಮೆರವಣಿಗೆ ತಡೆದು ಮೂವರನ್ನು ಪೊಲೀಸರು ಬಂಧಿಸಿರುವುದು ಖಂಡನೀಯ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಕುವೆತ್ತಬೈಲ್ ಆರೋಪಿಸಿದ್ದಾರೆ.

ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಬಿಜೆಪಿ ಮಂಗಳೂರು ಮಂಡಲದ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಘಟನೆ ಬಳಿಕ ಶಾರದೋತ್ಸವ ಮೆರವಣಿಗೆ ಅಲ್ಲೇ ಸ್ಥಗಿತಗೊಳಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಯಿತು. ಈ ವೇಳೆ ಬಿಜೆಪಿ ಹಿರಿಯ ಮುಖಂಡರು ಠಾಣೆಯಲ್ಲಿ ಸಭೆ ನಡೆಸಿ ಇಬ್ಬರನ್ನು ಬಿಡುಗಡೆ ಮಾಡಿಸಲಾಯಿತು. ಇದರ ಬಳಿಕ ಶಾರದೋತ್ಸವ ವಿಸರ್ಜನೆ ಮಾಡಲಾಗಿದೆ. ಇದೇ ಘಟನೆಗೆ ಸಂಬಂಧಿಸಿ ಪೊಲೀಸರು 30 ಜನರ ಸಹಿತ ಇತರ 150 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಪ್ರಕರಣವನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ವೇಳೆ ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ, ಉಳ್ಳಾಲ ಮೊಗವೀರ ಸಮಾಜದ ಮುಖಂಡ ಬಾಬು ಬಂಗೇರ, ಬಿಜೆಪಿ ಯುವಮೋರ್ಚದ ಜಿಲ್ಲಾ ಉಪಾಧ್ಯಕ್ಷ ನಿಶಾಂತ್ ಪೂಜಾರಿ, ಯಶವಂತ ಅಮೀನ್ ಉಪಸ್ಥಿತರಿದ್ದರು.