ಮಂಗಳೂರು, ಅ. 08 (DaijiworldNews/AA): ವ್ಯಕ್ತಿಯೊಬ್ಬರ ಮೃತದೇಹದ ಕಳೇಬರ ತೊಕ್ಕೊಟ್ಟು ಸಮೀಪದ ತಲಪಾಡಿಯ ದೇವಿಪುರ ರಸ್ತೆಯಲ್ಲಿನ ಫಾರ್ಮ್ನ ಪೊದೆಗಳಲ್ಲಿ ಪತ್ತೆಯಾಗಿದೆ. ಲುಂಗಿಯೊಂದು ಮರದಲ್ಲಿ ಕಟ್ಟಿರುವ ಸ್ಥಿತಿಯಲ್ಲಿರುವುದರಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.





ರಾಹುಲ್ ಕುಮಾರ್ ಎಂಬ ಬಿಹಾರ ಮೂಲದ ವ್ಯಕ್ತಿ ಎರಡು ತಿಂಗಳ ಹಿಂದೆ ಕಾಸರಗೋಡು ಮಂಜೇಶ್ವರ ಕುಂಜತ್ತೂರಿನಿಂದ ನಾಪತ್ತೆಯಾಗಿದ್ದ ಈ ಬಗ್ಗೆ ಆ.7 ರಂದು ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತನ ಮೃತದೇಹ ಇದಾಗಿದೆ ಎಂದು ಹೇಳಲಾಗುತ್ತಿದೆ.
ಉಳ್ಳಾಲ ಪೊಲೀಸರು ಪರಿಶೀಲನೆ ನಡೆಸಿದಾಗ ಮೃತಪಟ್ಟ ವ್ಯಕ್ತಿ ಧರಿಸಿದ್ದ ಪ್ಯಾಂಟ್ ನಲ್ಲಿ ಮೊಬೈಲ್ ಪತ್ತೆಯಾಗಿದೆ. ಇದರ ಆಧಾರದಲ್ಲಿ ಮೃತದೇಹದ ಗುರುತು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳದಲ್ಲಿ ಹಸಿರು ಬರ್ಮುಡ ಚಡ್ಡಿ, ಹಸಿರು ಟೀ ಶರ್ಟ್ ಪತ್ತೆಯಾಗಿದ್ದು ಮೇಲ್ನೋಟಕ್ಕೆ ಅದು ಗಂಡಸಿನ ದೇಹದ ಅವಶೇಷಗಳಂತೆ ಕಾಣುತ್ತಿತ್ತು. ಮರದ ಗೆಲ್ಲಲ್ಲಿ ನೈಲಾನ್ ಹಗ್ಗದ ನೇಣಿನ ಕುಣಿಕೆ ಇದ್ದು ಅದರಲ್ಲಿ ಹೆಡ್ ಫೋನ್ ಮತ್ತು ಎಲುಬುಗಳು ನೇತಾಡುತ್ತಿತ್ತು. ಬರ್ಮುಡ ಚಡ್ಡಿಯಲ್ಲಿ ಮೊಬೈಲ್ ಫೋನ್ ಕೂಡ ಪತ್ತೆಯಾಗಿತ್ತು. ಇದೀಗ ತಲಪಾಡಿಯಲ್ಲಿ ಸಿಕ್ಕಿರುವ ಮಾನವನ ಅಸ್ಥಿಪಂಜರದ ಅವಶೇಷಗಳ ಜೊತೆಯಲ್ಲಿ ದೊರೆತ ಮೊಬೈಲ್ ಸಿಮ್ ಕಾರ್ಡ್ ಸಂಖ್ಯೆ ಮತ್ತು ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ರಾಹುಲ್ ಮೊಬೈಲ್ ಸಂಖ್ಯೆ ಪರಸ್ಪರ ತಾಳೆಯಾಗಿದ್ದು ಕಳೇಬರ ರಾಹುಲ್ ನದ್ದಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಎಫ್ಎಸ್ಎಲ್ ವರದಿ ಬಂದ ಬಳಿಕವೇ ಮೃತರ ಅಧಿಕೃತ ಗುರುತು ಪತ್ತೆಯಾಗಲಿದೆ. ಉಳ್ಳಾಲ ಪೊಲೀಸರು ಮತ್ತು ಸೋಕೊ (ಸೀನ್ ಆಫ್ ಕ್ರೈಂ ಆಫೀಸರ್ಸ್) ತಂಡ ಬುರುಡೆ, ಎಲುಬುಗಳು ಮತ್ತು ಇತರ ಅವಶೇಷಗಳನ್ನು ಸಂಸ್ಕರಿಸಿ ಎಫ್ಎಸ್ಎಲ್ ಪರಿಶೀಲನೆಗೆ ಕಳುಹಿಸಿದ್ದಾರೆ.
ಫಾರ್ಮ್ ಸುತ್ತಲೂ ಆವರಣ ಗೋಡೆಯಿದ್ದು ಇದರೊಳಗೆ ಕುಂಜತ್ತೂರಿನ ವಲಸೆ ಕಾರ್ಮಿಕ ಹೇಗೆ ಬಂದ. ಸಾವು ಹೇಗಾಯಿತು.? ಆತ್ಮಹತ್ಯೆಯೋ ಎಂಬ ಬಗ್ಗೆ ತನಿಖೆ ಮುಂದುವರೆದಿದೆ. ಉಳ್ಳಾಲ ಮತ್ತು ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.