ಮಂಗಳೂರು, ಅ. 16 (DaijiworldNews/TA): ಮೀನುಗಾರರು ಅತ್ಯಧಿಕ ಸಂಖ್ಯೆಯಲ್ಲಿ ಇರುವ ಬಂದರು ಪ್ರದೇಶದಲ್ಲಿ ನಿರ್ಮಿಸಿಕೊಡಬೇಕಿದ್ದ ಇಂದಿರಾ ಕ್ಯಾಂಟೀನನ್ನು ತೆರೆಯದೆ ನಿರ್ಲಕ್ಷ್ಯ ಮಾಡಿರುವ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ, ಕೂಡಲೇ ಇಂದಿರಾ ಕ್ಯಾಂಟೀನ್ ಸೇವೆ ಆರಂಭಿಸಲು ಒತ್ತಾಯಿಸಿ ಹಳೆ ಬಂದರು ಹಳೆ ಮುನ್ಸಿಪಲ್ ಕಚೇರಿ ಬಳಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್ ಎದುರು ಬಂದರು ಶ್ರಮಿಕರ ಸಂಘ ಮತ್ತು ಡಿವೈಎಫ್ಐ ಬಂದರು ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಡಿವೈಎಫ್ಐ ಜಿಲ್ಲಾಧ್ಯಕ್ಷರೂ, ಬಂದರು ಶ್ರಮಿಕರ ಸಂಘದ ಅಧ್ಯಕ್ಷರೂ ಆಗಿರುವ ಬಿ.ಕೆ ಇಮ್ತಿಯಾಜ್ ಪ್ರತಿಭಟನೆ ಉದ್ಧೇಶಿಸಿ ಮಾತನಾಶಿ ನಗರದ ಆರ್ಥಿಕತೆಗೆ ಜನ್ಮ ಕೊಟ್ಟ ಬಂದರು ಪ್ರದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರನ್ನು ಕಡೆಗಣಿಸಲಾಗುತ್ತಿದೆ, ಬಂದರಿನ ಕಾರ್ಮಿಕರ ಶ್ರಮದಿಂದ ನಗರ ಅಭಿವೃದ್ಧಿ ಆಗಿದೆ ಆದರೆ ಹಳೆ ಬಂದರಿನ ಕಾರ್ಮಿಕರಿಗೆ ಆದ್ಯತೆಯಲ್ಲಿ ಆರಂಭಿಸಬೇಕಿದ್ದ ಇಂದಿರಾ ಕ್ಯಾಂಟೀನ್ ಕಾಮಗಾರಿ ಮುಗಿಸಿ ವರ್ಷಗಳು ಕಳೆದರೂ ತೆರೆಯದೆ ಬಡವರಿಗೆ ಅನ್ಯಾಯ ಮಾಡಲಾಗಿದೆ, ದುಬಾರಿ ಹೋಟೆಲ್ ಆಹಾರ ಖರೀದಿಸಲು ಸಾಧ್ಯವಿಲ್ಲದ ಕಾರ್ಮಿಕರ ಹಸಿವು ತಣಿಸಲು ಕೂಡಲೇ ಇಂದಿರಾ ಕ್ಯಾಂಟೀನ್ ತೆರೆಯ ಬೇಕೆಂದು ಆಗ್ರಹಿಸಿದರು.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ಮಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸದೆ ನಿರ್ಲಕ್ಷ್ಯ ಮಾಡಿರುವುದು ಅಧಿಕಾರಿಗಳು ಮತ್ತು ಜನಪ್ರತಿನಿದಿನಗಳ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಬಂದರು ಶ್ರಮಿಕರ ಸಂಘದ ಪ್ರಮುಖರಾದ ಫಾರೂಕ್ ಉಳ್ಳಾಲಬೈಲ್, ಶಮೀರ್ ಬೋಳಿಯಾರ್, ಮಾಧವ ಕಾವೂರು, ಮೋಹನ ಕುಂಪಲ, ಹರೀಶ್ ಕೆರೆಬೈಲ್, ಅಕ್ಬರ್, ಮುಂತಾದವರು ಉಪಸ್ಥಿತರಿದ್ದರು.