ಬಂಟ್ವಾಳ, ಅ. 17 (DaijiworldNews/AK):ಇತಿಹಾಸ ಪ್ರಸಿದ್ಧ ಕಾರಣೀಕ ಕ್ಷೇತ್ರ ಬಂಟ್ವಾಳದ ಪಣೋಲಿಬೈಲು ಕಲ್ಲುರ್ಟಿ ದೇವಸ್ಥಾನದಲ್ಲಿ ಅ.17 ರಂದು ಶುಕ್ರವಾರ ಮಧ್ಯಾಹ್ನ ಹೊಸ ಅಕ್ಕಿ ಅಗೆಲು ಸೇವೆ ನಡೆಯಿತು.



ಪ್ರತೀ ವರ್ಷ ಕಾವೇರಿ ಸಂಕ್ರಮಣದಂದು ಕ್ಷೇತ್ರದಲ್ಲಿ ಹೊಸ ಅಕ್ಕಿಯ ಅಗೆಲು ಸೇವೆ ನಡೆಯುತ್ತದೆ. ಊರ ಪರ ಊರ ಭಕ್ತರು ಪುದ್ದಾರ್ ಅಗೆಲು ಸೇವೆಗೆ ವಿವಿಧ ಬಗೆಯ ತರಕಾರಿಗಳನ್ನು ನೀಡುತ್ತಾರೆ. ಈ ದಿನ ಅಗೆಲು ಸೇವೆಯಲ್ಲಿ ತರಕಾರಿಗಳನ್ನು ಬಿಡಿಸುವುದು ವಿಶೇಷವಾಗಿದೆ. ಇಲ್ಲಿ ಇತರೆ ದಿನಗಳಲ್ಲಿ ನಡೆಯುವ ಅಗೆಲು ಸೇವೆಯಂತೆ ದೈವಕ್ಕೆ ಅಗೆಲು ಸೇವೆ ಈ ಕಾವೇರಿ ಸಂಕ್ರಮಣದ ದಿನದಂದು ನಡೆಯುತ್ತದೆ. ಅಗೆಲು ಬಡಿಸಲು ಹೊಸ ಅಕ್ಕಿಯನ್ನು ಉಪಯೋಗಿಸಲಾಗುತ್ತದೆ. ಇದರ ಜೊತೆ ಭಕ್ತರು ನೀಡಿದ ತರಕಾರಿಗಳನ್ನು ಅಗೆಲು ಜೊತೆ ಸೇರಿಸಿ ಬಡಿಸಲಾಗುತ್ತದೆ.
ಕಾವೇರಿ ಸಂಕ್ರಮಣ ಸೋಮವಾರ ಅಥವಾ ಶನಿವಾರ ಬಂದಲ್ಲಿ ದೈವಕ್ಕೆ ಅಗೆಲು ಸೇವೆ ಮಾಡುವುದಿಲ್ಲ , ಇದರ ಬದಲಾಗಿ ಮುಂದಿನ ದಿನ ಅಥವಾ ಮರುದಿನ ಹೊಸ ಅಕ್ಕಿ ಅಗೆಲು ಬಡಿಸಲಾಗುತ್ತದೆ. ಪಣೋಲಿಬೈಲು ಕ್ಷೇತ್ರದಲ್ಲಿ ಆದಿತ್ಯವಾರ,ಮಂಗಳವಾರ ಮತ್ತು ಶುಕ್ರವಾರ ಅಗೆಲು ನಡೆಯುತ್ತದೆ. ಕಾವೇರಿ ಸಂಕ್ರಮಣ ವಾರದ ಮಧ್ಯೆ ಅಂದರೆ ಅಗೆಲು ನಡೆಯುವ ದಿನಗಳಲ್ಲದ ದಿನದಲ್ಲಿ ಬಂದಾಗ ವಿಶೇಷವಾಗಿರುತ್ತದೆ.
ಕಳೆದ ವರ್ಷ ಕಾವೇರಿ ಸಂಕ್ರಮಣ ಗುರುವಾರ ದಿವಸ ಬಂದಿತ್ತು. 1480 ಅಗೆಲು ಸೇವೆಯನ್ನು ಭಕ್ತರು ಕಾವೇರಿ ಸಂಕ್ರಮಣದ ಪುದ್ದಾರ್ ಸೇವೆಗೆ ನೀಡಿದ್ದಾರೆ. ಪಣೋಲಿಬೈಲು ಕ್ಷೇತ್ರದ ಒಂದನೇ ಅರ್ಚಕ ವಾಸು ಮೂಲ್ಯ, ಎರಡನೇ ಅರ್ಚಕ ನಾರಾಯಣ ಮೂಲ್ಯ,ಮೂರನೇ ಅರ್ಚಕ ಮೋನಪ್ಪ ಮೂಲ್ಯ , ಕಾರ್ಯನಿರ್ವಾಹಣಾಧಿಕಾರಿ ದಿವಾಕರ ಮುಗುಳಿಯ, ಅಹಾರ ಶಿರಸ್ತೆದಾರ ಶಿವಪ್ರಸಾದ್, ಆಹಾರ ನಿರೀಕ್ಷಕ ಪ್ರಶಾಂತ ಶೆಟ್ಟಿ, ತಾಲೂಕು ಸಿಬ್ಬಂದಿ ಬಾನುಪ್ರಕಾಶ್, ದೈವದ ಚಾಕರಿಯವರಾದ ರಮೇಶ್ ಕುಲಾಲ್ ಪಣೋಲಿಬೈಲು, ಭಂಡಾರದ ಮನೆಯ, ಜಯರಾಮ್ ಶೆಟ್ಟಿ ನಗ್ರಿಗುತ್ತು ಹಾಗೂ ದೈವದ ಚಾಕರಿಯವರು,ಸಿಬ್ಬಂದಿ ಹಾಗೂ ಊರಪರ ಊರಭಕ್ತರು ವಿಶೇಷ ದಿನದ ಪುದ್ದಾರ್ ಸೇವೆಯಲ್ಲಿ ಹಾಜರಿದ್ದರು.