ಕುಂದಾಪುರ, ಅ. 18 (DaijiworldNews/AA): ಕೋರ್ಟಿನ ಆವರಣಕ್ಕೆ ಮದ್ಯಪಾನ ಮಾಡಿ ಬಂದಿದ್ದಲ್ಲದೆ, ಅಲ್ಲಿಯೇ ಧೂಮಪಾನ ಮಾಡಿ, ಸಾರ್ವಜನಿಕ ಸ್ಥಳದಲ್ಲಿ ಮೂವರು ಅನುಚಿತವಾಗಿ ವರ್ತಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದ್ದು, ಈ ಮೂವರಿಗೆ ಎಚ್ಚರಿಕೆ ನೀಡಿದ್ದಲ್ಲದೆ ನ್ಯಾಯಾಲಯದ ಶೌಚಾಲಯ ತೊಳೆಯುವಂತೆ ಕುಂದಾಪುರದ ಒಂದನೇ ಅಧಿಕ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶೆ ಶ್ರುತಿಶ್ರೀ ಅವರು ಆದೇಶಿಸಿದ್ದಾರೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಾಕ್ಷಿ ಹೇಳಲು ಕೋರ್ಟಿಗೆ ಆಗಮಿಸಿದ್ದ ಈ ಮೂವರು, ತಮ್ಮ ಸರದಿಗಾಗಿ ಹೊರಗಡೆ ಹಾಕಲಾದ ಬೆಂಚಿನಲ್ಲಿ ಕಾಯುತ್ತಿದ್ದರು. ಈ ವೇಳೆ ಅವರು ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದುದಲ್ಲದೆ, ಅಲ್ಲಿಯೇ ಧೂಮಪಾನ ಸಹ ಮಾಡುತ್ತಿದ್ದರು. ಇದನ್ನು ಗಮನಿಸಿದ ಕೋರ್ಟ್ ಸಿಬ್ಬಂದಿ ವಿಚಾರವನ್ನು ನ್ಯಾಯಾಧೀಶರ ಗಮನಕ್ಕೆ ತಂದಿದ್ದಾರೆ. ಕೂಡಲೇ ಕರೆಸಿ, ವಿಚಾರಣೆ ನಡೆಸಿ ಈ ರೀತಿ ಕೋರ್ಟಿನಲ್ಲಿ ಅನುಚಿತ ವರ್ತಿಸಿದ್ದಕ್ಕೆ ಎಚ್ಚರಿಕೆ ನೀಡಿ, ದಂಡದ ರೂಪವಾಗಿ ಶೌಚಾಲಯವನ್ನು ಸ್ವಚ್ಛಗೊಳಿಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಆ ಬಳಿಕ ಆ ಮೂವರು ಕೋರ್ಟಿನ ಶೌಚಾಲಯವನ್ನು ಸ್ವಚ್ಛಗೊಳಿಸಿ, ತೆರಳಿದ್ದಾರೆ ಎನ್ನಲಾಗಿದೆ.