ಮಂಗಳೂರು, ಅ. 18 (DaijiworldNews/AA): ಇ ಪರಿವಾಹನ್ ಚಲನ್ ಆಧಾರಿತ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬರ ಮೊಬೈಲ್ ಫೋನ್ ಹ್ಯಾಕ್ ಆಗಿ 64,000 ರೂ. ಕಳೆದುಕೊಂಡ ಘಟನೆಗೆ ಸಂಬಂಧಿಸಿದಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರು ಅಕ್ಟೋಬರ್ 5 ರಂದು ಸ್ನೇಹಿತರನ್ನು ಭೇಟಿ ಮಾಡಲು ನಗರಕ್ಕೆ ಬಂದಿದ್ದರು. ಅಂದು ಸಂಜೆ, ಅವರಿಗೆ ಅಪರಿಚಿತ ಸಂಖ್ಯೆಯಿಂದ ಇ ಪರಿವಾಹನ್ ಚಲನ್ ಆಧಾರಿತ ಲಿಂಕ್ ಇರುವ ವಾಟ್ಸಾಪ್ ಸಂದೇಶ ಬಂದಿತ್ತು. ಆ ರಾತ್ರಿ, ಅವರು ಅದನ್ನು ಪರಿಶೀಲಿಸಲು ಆ ಲಿಂಕ್ ಅನ್ನು ಕ್ಲಿಕ್ ಮಾಡಿದ್ದಾರೆ. ಪರಿಣಾಮ ಅವರ ಸಂಪೂರ್ಣ ಮೊಬೈಲ್ ಫೋನ್ ಹ್ಯಾಕ್ ಆಗಿದೆ.
ವಂಚಕರು ದೂರುದಾರರ ಫೋನಿನಲ್ಲಿರುವ ಯುಪಿಐ ಆಧಾರಿತ ಅಪ್ಲಿಕೇಶನ್ಗಳಿಗೆ ಪ್ರವೇಶ ಪಡೆದುಕೊಂಡಿದ್ದಾರೆ. ಇದರಿಂದಾಗಿ ವಿಭಿನ್ನ ಲಾಗಿನ್ಗಳ ಒಟಿಪಿಗಳು ಅವರಿಗೆ ಬಂದಿದೆ. ನಂತರ ಅವರಿಗೆ ತಿಳಿಯದಂತೆ ಎರಡು ಪ್ರತ್ಯೇಕ ವಹಿವಾಟುಗಳ ಮೂಲಕ 60,000 ರೂ. ಮತ್ತು 4,000 ರೂ. ವರ್ಗಾಯಿಸಿಕೊಂಡಿದ್ದಾರೆ.
ಈ ವಂಚನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.