ಮಂಗಳೂರು, ಅ. 19 (DaijiworldNews/TA): ಹೊರವಲಯದ ಸುರತ್ಕಲ್, ಕೊಡಿಪಾಡಿ ಮಾಧವ ನಗರದಲ್ಲಿ ಚಂದ್ರಹಾಸ್ ಎಂಬವರ ಮನೆಗೆ ಸಿಡಿಲು ಬಡಿದು ಮೂವರು ಗಾಯಗೊಂಡ ಘಟನೆ ನಡೆದಿದೆ. ಶನಿವಾರ ರಾತ್ರಿ 7.30 ರ ಸುಮಾರಿಗೆ ಸಿಡಿಲು ಬಡಿದಿದೆ.

ಮನೆಯೊಳಗಿನ ಕೋಣೆಯೊಂದರಲ್ಲಿ ಓದಿಕೊಳ್ಳುತ್ತಿದ್ದ ಲಾವಣ್ಯ ಹಾಗೂ ಸೌಜನ್ಯ ಅವರ ತಲೆಯ ಭಾಗಕ್ಕೆ ಸಿಡಿಲೇಟು ಬಿದ್ದಿದ್ದರೆ, ಅಜ್ಜಿ ಬೇಬಿ ಅವರಿಗೆ ಕೈ ಭಾಗಕ್ಕೆ ತರಚಿದ ಗಾಯವಾಗಿದೆ. ಮನೆಯ ವಿದ್ಯುತ್ ಲೈನ್ ಗಳು ಸುಟ್ಟು ಹೋಗಿ ಹೊರಬಂದಿದ್ದು, ಗೋಡೆ ಬಿರುಕು ಬಿಟ್ಟಿದೆ. ಸ್ಥಳೀಯ ಮಹಾನಗರ ಪಾಲಿಕೆಯ ನಿಕಟ ಪೂರ್ವ ಸದಸ್ಯೆ ಶ್ವೇತಾ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.