ಧರ್ಮಸ್ಥಳ, ಅ. 19 (DaijiworldNews/TA): ಗ್ರಾಮದ ಬುರುಡೆ ಪ್ರಕರಣದ ಎಸ್ಐಟಿ ತನಿಖೆಗೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ತೆರಳಿ ಆರೋಪಿ ಚಿನ್ನಯ್ಯನ ಹೇಳಿಕೆ ಪಡೆಯುವ ಕಾರ್ಯವನ್ನು ಶನಿವಾರ ಪೂರ್ತಿಗೊಳಿಸಿದ್ದಾರೆ.

ಚಿನ್ನಯ್ಯನು ಧರ್ಮಸ್ಥಳದಲ್ಲಿ ಅನಾಥ ಮೃತದೇಹಗಳನ್ನು ಹೂತಿರುವುದಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಆತನಿಂದ ಹೆಚ್ಚಿನ ಹೇಳಿಕೆ ಪಡೆಯುವ ದೃಷ್ಟಿಯಿಂದ ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯದಿಂದ ಅನುಮತಿ ಪಡೆದು ಅ. 17ರಂದು ಚಿನ್ನಯ್ಯ ಇರುವ ಶಿವಮೊಗ್ಗ ಕಾರಾಗೃಹಕ್ಕೆ ತೆರಳಿದ್ದರು. ಎಸ್ಐಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರ ತಂಡವು ಶನಿವಾರವೂ ಹೇಳಿಕೆ ಪಡೆಯುವ ಕಾರ್ಯ ಮುಂದುವರಿಸಿತ್ತು.
ಶಿವಮೊಗ್ಗದಿಂದ ಎಸ್ಐಟಿಯವರು ಆಗಮಿಸಿ ಆತನ ಹೇಳಿಕೆಯ ಆಧಾರದಿಂದ ಮುಂದಿನ ತನಿಖೆ ಕೈಗೊಳ್ಳಲಿದ್ದು, ಒಂದಷ್ಟು ಮಂದಿಯ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಜತೆಗೆ ಇತರ ದೃಷ್ಟಿಕೋನದಿಂದಲೂ ತನಿಖೆ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿದೆ.