ಉಡುಪಿ, ಅ. 20 (DaijiworldNews/TA): ಅಭಿಷೇಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಎಸ್ಪಿ ಹರಿರಾಂ ಶಂಕರ್ ಹೆಚ್ಚಿನ ಮಾಹಿತಿ ನೀಡಿದ್ದಾರೆ. ಈ ವರೆಗೆ ಹನಿಟ್ರ್ಯಾಪ್ ನಡೆದಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರ ಲಭ್ಯವಾಗಿಲ್ಲ. ಅದೂ ಅಲ್ಲದೆ ಆರೋಪಿತೆ ಹುಡುಗಿಯ ಫೋನ್ನಲ್ಲಿ ಯಾವುದೇ ಅಶ್ಲೀಲ ಫೋಟೋಗಳು ಅಥವಾ ವೀಡಿಯೊಗಳು ಕಂಡುಬಂದಿಲ್ಲ. ಆಕೆ ಯಾರಿಗೂ ಯಾವುದೇ ವೀಡಿಯೊಗಳನ್ನು ಫಾರ್ವರ್ಡ್ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್ನಲ್ಲಿ ಅಭಿಷೇಕ್ ಹುಡುಗಿಗೆ ವರ್ಗಾಯಿಸಿದ ಹಣವನ್ನು ಅದೇ ದಿನ ಹುಡುಗಿ ಹಿಂತಿರುಗಿಸಿದ್ದಾಳೆ. ಇಬ್ಬರೂ ಕೂಡ ಯಾವುದೇ ರೀತಿಯ ಸಂಬಂಧದಲ್ಲಿ ಇರದ ಹಿನ್ನೆಲೆಯಲ್ಲಿ ಹಣ ತನಗೆ ಬೇಡ ಎಂದು ಹೇಳಿದ್ದಾಳೆ. ಆತ್ಮಹತ್ಯೆ ಮಾಡುವುದಕ್ಕೂ ಮುನ್ನ ಅಭಿಷೇಕ್ ಕೆಲವೊಂದು ಅಶ್ಲೀಲ ವಿಡಿಯೋಗಳನ್ನು ವಾಟ್ಸ್ಯಾಪ್ ಗ್ರೂಪ್ ನಲ್ಲಿ ಹಂಚಿಕೊಂಡಿದ್ದಾನೆ. ಹೀಗಾಗಿ ಆರೋಪಿತೆ ಹುಡುಗಿ ಕರೆ ಮಾಡಿ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಳು. ಇನ್ನು ಅಭಿಷೇಕ್ ನ ಫೋನ್ ನ ವಿವರವಾದ ವಿಶ್ಲೇಷಣೆ ಮಾಡುವ ಸಲುವಾಗಿ ಅದನ್ನು ಎಫ್ ಎಸ್ ಎಲ್ ಗೆ ಕಳುಹಿಸಲಾಗಿದೆ.
ಬಟ್ಟೆ ಬದಲಾಯಿಸುವ ವಿಡಿಯೋ ಹರಿದಾಡುತ್ತಿದ್ದು, ಈ ವಿಡಿಯೋವನ್ನು ಯಾವುದೇ ಸುಲಿಗೆ ಉದ್ದೇಶಗಳಿಗಾಗಿ ಫಾರ್ವರ್ಡ್ ಮಾಡಲಾಗಿದೆಯೇ ಅಥವಾ ದುರುಪಯೋಗಪಡಿಸಿಕೊಳ್ಳಲಾಗಿದೆಯೇ ಎಂದು ಪರಿಶೀಲನೆ ನಡೆಸಲಾಗುವುದು. ಡೆತ್ ನೋಟ್ ನ ಕೈಬರಹವನ್ನು ಕೂಡ ಪರಿಶೀಲನೆ ಮಾಡಲಾಗುತ್ತಿದೆ ಎಂದು ಎಸ್ಪಿ ಮಾಹಿತಿ ನೀಡಿದರು.