ಮಂಗಳೂರು, ಅ. 20 (DaijiworldNews/AA): ಭಾನುವಾರ ಸಂಜೆಯಿಂದ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿದಿದ್ದು, ಕರಾವಳಿ ತೀರದುದ್ದಕ್ಕೂ ಮುಂಗಾರು ಪೂರ್ವ ಮಳೆ ತೀವ್ರಗೊಂಡಿದೆ. ಇದರಿಂದ ಹಲವು ಮನೆಗಳಿಗೆ ಹಾನಿಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಸುರತ್ಕಲ್, ಬಂಟ್ವಾಳ, ಕಲ್ಲಡ್ಕ, ಬಿ.ಸಿ. ರೋಡ್, ಬೆಳ್ತಂಗಡಿ, ಮಡಂತ್ಯಾರು, ಉಜಿರೆ, ಧರ್ಮಸ್ಥಳ, ಕನ್ಯಾನ, ವಿಟ್ಲ, ಕಡಬ, ಸುಳ್ಯ, ಸುಬ್ರಹ್ಮಣ್ಯ, ಪಂಜ, ಬೆಳ್ಳಾರೆ, ಪುತ್ತೂರು, ಉಪ್ಪಿನಂಗಡಿ, ಮೂಡುಬಿದಿರೆ ಮತ್ತು ಬಜ್ಪೆ ಸೇರಿದಂತೆ ದಕ್ಷಿಣ ಕನ್ನಡದ ಹಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಅಪ್ಪಳಿಸಿದೆ. ಮಂಗಳೂರು ನಗರದಲ್ಲಿ ಸಂಜೆ 6 ಗಂಟೆ ಸುಮಾರಿಗೆ ಸುರಿದ ಮಳೆ ಮತ್ತು ಬಿರುಗಾಳಿಯಿಂದ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಸಂಚಾರಕ್ಕೆ ಅಡಚಣೆಯುಂಟಾಯಿತು.
ಕುಲಶೇಖರದಲ್ಲಿ 10 ಮನೆಗಳಿಗೆ ಸಿಡಿಲು ಹಾನಿ ಶನಿವಾರ ಕುಲಶೇಖರದಲ್ಲಿ ಸಿಡಿಲು ಬಡಿದು ಹತ್ತು ಮನೆಗಳಿಗೆ ಹಾನಿಯಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡು, ವಿದ್ಯುತ್ ಮೀಟರ್ಗಳು ಸುಟ್ಟು ಹೋಗಿವೆ. ಶಾಸಕ ಐವನ್ ಡಿಸೋಜಾ ಅವರು ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆಯಿಂದಾಗಿ ನಗರದಾದ್ಯಂತ ದೀಪಾವಳಿ ಹಬ್ಬದ ವ್ಯಾಪಾರದ ಮೇಲೂ ಪರಿಣಾಮ ಬೀರಿದೆ.
ಮೂಡುಬಿದಿರೆ: ಇರುವೈಲ್ನಲ್ಲಿ ಸಿಡಿಲಿಗೆ ಮನೆ ಹಾನಿ
ಮೂಡುಬಿದಿರೆಯ ಇರುವೈಲ್ನ ದೇವರಗುಡ್ಡೆಯ ರೇವತಿ ಪೂಜಾರ್ತಿ ಅವರ ಮನೆಗೆ ಶನಿವಾರ ಸಂಜೆ ಸಿಡಿಲು ಬಡಿದು ಹಾನಿಯಾಗಿದೆ. ಅದೃಷ್ಟವಶಾತ್, ಘಟನೆ ಸಂಭವಿಸಿದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಇದರಿಂದ ಪ್ರಾಣಾಪಾಯ ತಪ್ಪಿದೆ. ಸಿಡಿಲು ಬಡಿದ ಪರಿಣಾಮ ವಿದ್ಯುತ್ ಉಪಕರಣಗಳು ಮತ್ತು ಮನೆಯ ವಸ್ತುಗಳು ಹಾನಿಗೊಂಡಿವೆ.
ಬಂಟ್ವಾಳ - ಬೆಳ್ತಂಗಡಿಯಲ್ಲಿ ಸಾಧಾರಣ ಮಳೆ ವರದಿ
ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಭಾನುವಾರ ಸಂಜೆ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಯಾವುದೇ ದೊಡ್ಡ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಅಕ್ಟೋಬರ್ 18ರ ಸಂಜೆ ಪ್ರಾರಂಭವಾದ ಮಳೆ ತಡರಾತ್ರಿಯವರೆಗೆ ಮುಂದುವರಿದಿತ್ತು.
ಮುಂದಿನ ಕೆಲವು ದಿನಗಳವರೆಗೆ ಯೆಲ್ಲೋ ಅಲರ್ಟ್ ನೀಡಿದ ಐಎಂಡಿ
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಕರಾವಳಿಯಲ್ಲಿ ಮುಂದಿನ ಒಂದು ವಾರದವರೆಗೆ ಮಳೆ ಮುಂದುವರಿಯುವ ನಿರೀಕ್ಷೆಯಿದೆ. ಅಕ್ಟೋಬರ್ 20 ರಿಂದ 25 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದ್ದು, 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.
ಕಾಸರಗೋಡು: ಹಲವು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆ
ಭಾನುವಾರ ಸಂಜೆ ಮತ್ತು ರಾತ್ರಿ ಕಾಸರಗೋಡು ಜಿಲ್ಲೆಯ ಹಲವು ಭಾಗಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗಿದೆ. ಮಂಜೇಶ್ವರ, ಬದಿಯಡ್ಕ, ಪೆರ್ಲ, ಕುಂಬಳೆ ಮತ್ತು ಉಪ್ಪಳದಲ್ಲಿ ಉತ್ತಮ ಮಳೆಯಾಗಿದೆ. ಅಕ್ಟೋಬರ್ 20 ರಂದು ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉಡುಪಿ: ಅಕ್ಟೋಬರ್ 21 ರವರೆಗೆ ಯೆಲ್ಲೋ ಅಲರ್ಟ್
ಉಡುಪಿ ಜಿಲ್ಲೆಯಲ್ಲಿ ಅಕ್ಟೋಬರ್ 21 ರವರೆಗೆ ಮಳೆ ಮುಂದುವರಿಯುವ ಮುನ್ಸೂಚನೆ ನೀಡಲಾಗಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಭಾನುವಾರ ಸಂಜೆ ಬೈಂದೂರು, ಕುಂದಾಪುರ, ಕೋಟ, ಸಾಲಿಗ್ರಾಮ, ಬ್ರಹ್ಮಾವರ, ಉಡುಪಿ, ಮಣಿಪಾಲ, ಹೆಬ್ರಿ, ಶಿರಿಯಾರ, ಕಾಪು ಮತ್ತು ಪಡುಬಿದ್ರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿರಂತರ ಮಳೆ ಸುರಿದಿದೆ. ನಿರಂತರ ಮಳೆಯಿಂದಾಗಿ ದೀಪಾವಳಿ ಹಬ್ಬದ ಪಟಾಕಿ ಮಾರಾಟದ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.
ಕಾಪುವಿನಲ್ಲಿ ಮನೆಗೆ ಸಿಡಿಲು ಬಡಿದು ಹಾನಿ
ಕಾಪುವಿನ ಪಡುಗ್ರಾಮದಲ್ಲಿ ಶನಿವಾರ ಸಂಜೆ ಶಾಂತಾರಾಮ ಕೋಟ್ಯಾನ್ ಅವರ ಮನೆಗೆ ಸಿಡಿಲು ಬಡಿದು ಕಟ್ಟಡದ ವೈರಿಂಗ್, ಟಿವಿ, ರೆಫ್ರಿಜರೇಟರ್ ಮತ್ತು ಇತರ ವಿದ್ಯುತ್ ಉಪಕರಣಗಳು ಹಾಳಾಗಿವೆ. ಘಟನೆಯ ಸಂದರ್ಭ ಮನೆಯವರು ಹೊರಗೆ ಹೋಗಿದ್ದರಿಂದ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಸುಮಾರು 3 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕಂದಾಯ ಅಧಿಕಾರಿಗಳು ಮತ್ತು ನಗರಸಭೆಯ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪುತ್ತೂರಿನಲ್ಲಿ ಮನೆ ಮತ್ತು ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿ
ಪುತ್ತೂರು ತಾಲೂಕಿನ ಕೋಡಿಂಬಾಡಿ ಬಳಿಯ ಬೆಳ್ಳಿಪ್ಪಾಡಿಯಲ್ಲಿ ಅಕ್ಟೋಬರ್ 19ರ ಸಂಜೆ ಅನಂತ ರಾಮ ಶೆಟ್ಟಿ ಅವರ ಮನೆಗೆ ಸಿಡಿಲು ಬಡಿದು ಗೋಡೆಗಳಲ್ಲಿ ಬಿರುಕು ಉಂಟಾಗಿದೆ. ಟಿವಿ ಮತ್ತು ಫ್ಯಾನ್ಗಳು ಸೇರಿದಂತೆ ಗೃಹಬಳಕೆಯ ವಿದ್ಯುತ್ ಉಪಕರಣಗಳು ಹಾಳಾಗಿವೆ. ವಿದ್ಯುತ್ ವೈರಿಂಗ್ಗಳು ಸಹ ಸುಟ್ಟುಹೋಗಿವೆ, ಆದರೆ ಮನೆಯ ಸದಸ್ಯರು ಸುರಕ್ಷಿತವಾಗಿ ಪಾರಾಗಿದ್ದಾರೆ.
ಬಂಟ್ವಾಳ: ಕುಮ್ಡೇಲುವಿನಲ್ಲಿ ಮನೆಗೆ ಹಾನಿ
ಅಕ್ಟೋಬರ್ 18 ರ ರಾತ್ರಿ ಬಂಟ್ವಾಳ ತಾಲೂಕಿನ ಕುಡ್ಮೇಲು ಗ್ರಾಮದ ಪುದುದಲ್ಲಿ ಹರೀಶ್ ಅವರ ಮನೆಯ ಸಿಟ್ಔಟ್ಗೆ ಸಿಡಿಲು ಬಡಿದು, ಮಾಡಿನ ಹೆಂಚುಗಳು ಮತ್ತು ಕಾಂಕ್ರೀಟ್ ಭಾಗಗಳಿಗೆ ಹಾನಿಯಾಗಿದೆ. ಘಟನೆಯ ಕುರಿತು ಕಂದಾಯ ಇಲಾಖೆಗೆ ಮಾಹಿತಿ ನೀಡಲಾಗಿದೆ.