ಉಡುಪಿ, ಅ. 20 (DaijiworldNews/AA): ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತಾ ಬಂದಿದ್ದು ಹಬ್ಬ ಹರಿದಿನದಲ್ಲಿ ಅದರ ಜೊತೆಗೆ ಸಂಸ್ಕೃತಿಯಲ್ಲೂ ಬದಲಾವಣೆ ತಂದೇ ಬಿಟ್ಟಿದೆ. ಹಿಂದೆಲ್ಲಾ ಹಬ್ಬ ಅಂದರೆ ಎಲ್ಲಿಲ್ಲದ ಸಂತೋಷ. ಊರಿನವರೆಲ್ಲ ಸೇರಿ ಇಡೀ ಊರನ್ನೇ ಸ್ವರ್ಗದಂತೆ ತಯಾರಿಸುತ್ತಿದ್ದರು. ಯಾವುದೇ ಬೇಧ ಭಾವ ಇಲ್ಲದೆ ಬಡವ ಶ್ರೀಮಂತ ಎನ್ನದೇ ಇರುತ್ತಿದ್ದರು.


ಪ್ರಸ್ತುತ ವ್ಯಕ್ತಿಯಲ್ಲಿ ಒಂದೆ ಅಲ್ಲದೆ ಸಂಸ್ಕೃತಿ, ಹಬ್ಬ, ಹರಿದಿನದಲ್ಲಿ ಬದಲಾವಣೆ ಯುಂಟಾಗಿದೆ ಎಂದು ಹಿರಿಯರಿದ್ದ ಮನೆಯಲ್ಲಿ ಈ ಮಾತುಗಳನ್ನ ಕೇಳಬಹುದು. ದೀಪಾವಳಿ ಅಂದರೆ "ದೀಪಗಳ ಹಾವಳಿ". ದೀಪ ಅಂದರೆ ಬೆಳಕು. ಈ ಹಬ್ಬವು ಬೆಳಕಿನ ಮಹತ್ವವನ್ನು ಹಾಗೂ ಸತ್ಯದ ಮಹತ್ವವನ್ನು ಸೂಚಿಸುತ್ತದೆ.
ದೀಪಾವಳಿ ಹಬ್ಬದ ಹಿಂದೆ ಹಲವು ಪೌರಾಣಿಕ ಕಥೆಗಳು ಇವೆ. ಲಕ್ಷ್ಮೀ ದೇವಿಯ ಜನ್ಮದಿನ, ಶ್ರೀ ರಾಮ ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಮರಳುವಾಗ ಜನರು ರಾಮನನ್ನು ಸ್ವಾಗತಿಸಲು ಸಾಲಿನಲ್ಲಿ ದೀಪಗಳನ್ನು ಬೆಳಗಿಸಿದ್ದರು, ಹಾಗೇ ಕೃಷ್ಣನು ನರಕಾಸುರನನ್ನು ಸಂಹರಿಸಿದ ದಿನ ನರಕ ಚತುರ್ದಶಿಯಂದು ನರಕಾಸುರನ ವಧೆಯಿಂದ ಲೋಕವು ದುಷ್ಟತನ ಮುಕ್ತವಾಯಿತು ಎಂದು.
ಒಟ್ಟಿನಲ್ಲಿ ದೀಪಾವಳಿ ಆಚರಿಸುವುದು ಸತ್ಯದ ಜಯ, ದುಷ್ಟರ ನಿರ್ನಾಮ ಎಂದು ಸಾರಿ ಹೇಳಲು. ಭಾರತದೆಲ್ಲೆಡೆ ಹಲವಾರು ರೀತಿಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ.
ಇಂದಿನ ಜನತೆ ಹಿಂದಿನವರ ಶಾಸ್ತ್ರ ಸಂಪ್ರದಾಯವನ್ನೇ ತಲೆ ಕೆಳಗೆ ಮಾಡಿದ್ದಾರೆ. ಅಂದೆಲ್ಲ ಮಣ್ಣಿನಲ್ಲಿ ದೀಪ ಮಾಡಿ ಎಲ್ಲರ ಮನೆಯಲ್ಲಿ ಜನಪದ ಹಾಡುಗಳನ್ನು ಹೇಳುತ್ತಾ ದೀಪ ಬೆಳಗಿ ಬೇಡಿಕೊಳ್ಳುತ್ತಿದ್ದರು. ಇಂದು ಧಾಮ್ ಧೂಮ್ ಎಂದು ಪಟಾಕಿ, ಸುರ್ಸುರ್ ಬತ್ತಿ , ಎಲ್ ಈ ಡಿ ಬಲ್ಬ್ ಗಳ ಬಳಕೆ. ಅಂದು ಹಬ್ಬದ ಒಂದು ವಾರ ಮೊದಲೇ ಮನೆ ಸಾರಿಸಿ, ರಂಗೋಲಿ ಹಾಕಿ, ಮಕ್ಕಳೆಲ್ಲ ಸೇರಿ ಹೂವಿನ ಹಾರ ತಯಾರಿಸುತ್ತಿದ್ದರು.
ಇಂದು ಎಲ್ಲ ಆನ್ಲೈನ್ ಆರ್ಡರ್, ಅಂಗಡಿಗೆ ಹೋಗಿ ರೆಡಿಮೇಡ್ ವಸ್ತುಗಳನ್ನ ತರುವುದು. ಅಂದು ಅಮ್ಮ ಚಿಕ್ಕಮ್ಮ ಅಜ್ಜಿಯರು ಮಾಡಿದ ತಿಂಡಿ ತಿನ್ನುತ್ತಾ ಸಾಂಪ್ರದಾಯಿಕ ಆಟವಾಡುತ್ತಾ ಅದೇ ಸ್ವರ್ಗ ಎಂಬತೆ ಇದ್ದರು. ಆಕಾಲದಲ್ಲಿ ದೀಪಾವಳಿ ಜನರಲ್ಲಿ ಪರಸ್ಪರ ಪ್ರೀತಿ, ಶುದ್ಧ ಮನಸ್ಸು ಹಾಗೆ ಸಮುದಾಯದ ಒಗ್ಗಟ್ಟಿನ ಸಂಕೇತವಾಗಿತ್ತು. ಜನರು ಶಬ್ದಕ್ಕಿಂತ ಬೆಳಕಿಗೆ, ಹಣಕ್ಕಿಂತ ಸಂತೋಷಕ್ಕೆ, ತೋರಿಕೆಗಿಂತ ಭಾವನೆಗೆ ಹೆಚ್ಚು ಮಹತ್ವ ಹಾಗೆ ಸಮಯವನ್ನು ನೀಡುತ್ತಿದ್ದರು.
ಈಗ ಅದೆಲ್ಲಾ ಮಾಯ. ಆಧುನಿಕತೆಯ ನೆಪದಲ್ಲಿ ಮಣ್ಣಿನ ದೀಪದ ಜಾಗಕ್ಕೆ ಎಲ್ ಈ ಡಿ ಬಲ್ಬ್, ಪಟಾಕಿ ಬಂತು. ಕುಟುಂಬದ ಜೊತೆಗಿಂತ ಇದ್ದಲ್ಲೇ ಸಿಹಿ ತಿನ್ನುವುದಾಗಿದೆ. ಸಿಹಿಯಾದರೂ ಮನೆಯಲ್ಲಿ ಮಾಡಿದ್ದಾ? ಅಲ್ಲಾ ಅದು ಕೂಡ ಬೇಕರಿಯದ್ದು.
ಹಿಂದೆ ಈ ಹಬ್ಬಕ್ಕೆ ಬೆಳಕಿನ ವಿಜಯ, ಸತ್ಯದ ಜಯ ಎಂದೆಲ್ಲ ಸಂದೇಶ ಇತ್ತು. ಇಂದು ಪಟಾಕಿ ಶಾಪಿಂಗ್ ಎಂದು ಅದಕ್ಕೆ ಪ್ರಾಮುಕ್ಯತೆ. ಹಿಂದಿನವರು ಮಾಡಿಟ್ಟ ಶಾಸ್ತ್ರ ಸಂಪ್ರದಾಯವನ್ನೇ ಪಾಲಿಸಬೇಕೆಂದಲ್ಲ, ಸ್ವಲ್ಪ ಅದರ ಹಿನ್ನಲೆ ತಿಳಿದು ಕಾರಣ ಹುಡುಕಿದರೆ ಸಿಗದಿರುವುದು ಯಾವುದಿಲ್ಲ. ಒಟ್ಟಿನಲ್ಲಿ ಅಂದಿನ ದೀಪಾವಳಿಯಲ್ಲಿ ಒಗ್ಗಟ್ಟು, ಸಂತೋಷ, ಸಾಂಸ್ಕೃತಿಕ ಪ್ರದರ್ಶನದಿಂದ ಕೂಡಿತ್ತು. ಇಂದು ಬರಿ ಪರಿಸರ ಮಾಲಿನ್ಯ, ಖರ್ಚು, ಅಪಘಾತ, ಇಂತದ್ದೇ.
ಆದ್ದರಿಂದ ಕಾಲ ಬದಲಾದರೂ ನಮ್ಮಲ್ಲಿ ಏನು ಬದಲಾವಣೆ ಆಗಬೇಕೋ ಅಷ್ಟೇ ಆಗಬೇಕು. ಎಲ್ಲದರಲ್ಲೂ ಬದಲಾವಣೆ ತಂದರೆ ನಮ್ಮ ಜೀವನದಲ್ಲಿ ಹೇಗೆ ಬದಲಾವಣೆ ಯಾಗುತ್ತದೆ ಎಂದು ತಿಳಿಯಬೇಕಾಗುತ್ತೆ.
ಉಷಾ ಭಟ್
ಎಂಜಿಎಂ ಕಾಲೇಜು ಉಡುಪಿ