ಮಂಗಳೂರು, ಅ. 22 (DaijiworldNews/ TA): ನವರಾತ್ರಿ ಹಬ್ಬದ ಸಂತಸವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಸೀರೆ ಸ್ಪರ್ಧೆಯನ್ನು ಆಯೋಜಿಸಿಕೊಂಡು ಬಂದಿರುವ ದಾಯ್ಜಿವರ್ಲ್ಡ್ ವಾಹಿನಿ, 2025ರ ನವರಂಗಿ ಸೀರೆ ವಿಡಿಯೋ ಸ್ಪರ್ಧೆಯನ್ನು ನೂತನ್ ಕ್ಲೋತ್ ಸೆಂಟರ್ ಮಡಂತ್ಯಾರು ಇವರ ಪ್ರಾಯೋಜಕತ್ವದಲ್ಲಿ ಸೆಪ್ಟೆಂಬರ್ 22ರಿಂದ 30ರ ವರೆಗೆ ನಡೆಸಿದ್ದು, ಇಂದು ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.















ದಾಯ್ಜಿವರ್ಲ್ಡ್ ಸಂಸ್ಥೆಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 9 ದಿನ 9 ಬಣ್ಣದ ಸೀರೆಯನ್ನು ಧರಿಸಿ ವಿಡಿಯೋ ಕಳುಹಿಸಿದ ನಾರಿಯರ ತಂಡಗಳನ್ನು ಆಹ್ವಾನಿಸಿ ವಿಜೇತರಾದ ತಂಡಗಳಿಗೆ ಬಹುಮಾನ ನೀಡಿ ಕೊನೆಯಲ್ಲಿ ಬಂಪರ್ ಬಹುಮಾನ ಪಡೆದ ಎರಡು ತಂಡಗಳಿಗೆ ಬಹುಮಾನ ವಿತರಣೆ ನಡೆಯಿತು.
ನವರಂಗಿ ಸೀರೆ ಸ್ಪರ್ಧೆಯ 9 ದಿನಗಳೂ ನಿಯಮಾನುಸಾರ ವಿಡಿಯೋ ಕಳುಹಿಸಿ ಪ್ರಥಮ ಬಂಪರ್ ಬಹುಮಾನವನ್ನು ಟೀಮ್ ಮಾಧುರ್ಯ ಬಂಟ್ವಾಳ ತಂಡ ಮುಡಿಗೇರಿಸಿಕೊಂಡಿದ್ದು ದ್ವೀತಿಯ ಬಂಪರ್ ಬಹುಮಾನವನ್ನು ಮಂಗಳೂರಿನ ವರ್ಣಿನಿ ವೃಂದ ಪಡೆದುಕೊಂಡಿದೆ. ಇನ್ನು ತೃತೀಯ ಬಂಪರ್ ಬಹುಮಾನವನ್ನು ಕಾಸರಗೋಡಿನ ಆಶ್ಲೀನ್ ಪ್ರಿಯ ಮತ್ತು ತಂಡ ತಮ್ಮದಾಗಿಸಿಕೊಂಡಿದೆ.
ಬಿಳಿ ಬಣ್ಣದ ಸೀರೆಯನ್ನು ಉಟ್ಟು ಬಹುಮಾನ ಪಡೆದ ನವರಂಗಿ ಸ್ಟಾರ್ಸ್ ಆಫ್ ಕೊಕ್ಕಡ, ಕೆಂಪು ಬಣ್ಣದಲ್ಲಿ ಮಿಂಚಿದ ಟೀಮ್ ಮಾಧುರ್ಯ, ನೀಲಿ ಬಣ್ಣದ ಸೀರೆಯಲ್ಲಿ ಗೆದ್ದ ಸ್ಟಾರ್ಸ್ ಆಫ್ ಆಗ್ನೇಸ್ ಮಂಗಳೂರು, ಹಳದಿ ಬಣ್ಣದಲ್ಲಿ ವರ್ಣಿನಿ ವೃಂದ, ಹಸಿರು ಬಣ್ಣದಲ್ಲಿ ಆಶ್ಲೀನ್ ಪ್ರಿಯ ಕಾಸರಗೋಡು, ಬೂದು ಬಣ್ಣದಲ್ಲಿ ಮಿಂಚಿದ ಶ್ರೀ ರಸ್ತು ಮತ್ತು ತಂಡ ಶಕ್ತಿನಗರ, ಕೇಸರಿ ಬಣ್ಣದ ಸುತ್ತಿನಲ್ಲಿ ವಿಜೇತರಾದ ಶ್ರುತಿ ಮತ್ತು ಕೆಡೆಂಜಿ ಫ್ಯಾಮಿಲಿ ಕಡಬ, ಗುಲಾಬಿ ಬಣ್ಣದಲ್ಲಿ ಅನುಷಾ ಮತ್ತು ತಂಡ ಬಿಕರ್ನಕಟ್ಟೆ ಹಾಗು ನೇರಳೆ ಬಣ್ಣದ ಸೀರೆ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಪೂರ್ಣಿಮಾ ಮತ್ತು ಬಳಗ ಬರೆಪ್ಪಾಡಿ ಇವರಿಗೆ ದಾಯ್ಜಿವರ್ಲ್ಡ್ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ, ಮಾರ್ಕೆಟಿಂಗ್ ಮ್ಯಾನೇಜರ್ ಪ್ರವೀಣ್ ತಾವ್ರೋ, ಪ್ರೊಡಕ್ಷನ್ ಮ್ಯಾನೇಜರ್ ಪ್ರಶಾಂತ್ ಸಿ.ಕೆ. ಅವರು ಬಹುಮಾನ ವಿತರಿಸಿದ್ದಾರೆ.
ಇನ್ನು ಬಂಪರ್ ಬಹುಮಾನವನ್ನು ತಮ್ಮದಾಗಿಸಿಕೊಂಡ ಟೀಮ್ ಮಾಧುರ್ಯ ಮತ್ತು ವರ್ಣಿನಿ ವೃಂದದವರು ಮಾತನಾಡಿ ನವರಂಗಿ ಸೀರೆ ವಿಡಿಯೋ ಸ್ಪರ್ಧೆಯ ಕುರಿತಂತೆ ಸಂತೋಷ ವ್ಯಕ್ತಪಡಿಸಿದರು. ಈ ಸಂದರ್ಭ ಸಂಸ್ಥೆಯ ಪ್ರೊಡಕ್ಷನ್ ಡೈರೆಕ್ಟರ್ ಸ್ಟ್ಯಾನಿ ಬೇಳ, ಕ್ಯಾಮರಾಮ್ಯಾನ್ ಕಿರಣ್ ಕೋಟ್ಯಾನ್, ಶಿವಪ್ರಸಾದ್ ಯೆಯ್ಯಾಡಿ, ನಿರೂಪಕಿ ಮಾನಸ ಮಡಿವಾಳ್, ಸಾಕ್ಷಿ ಶೆಟ್ಟಿ ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ದಶಕಗಳಿಂದ ಎಲ್ಲರ ನೆಚ್ಚಿನ ಬಟ್ಟೆ ಮಳಿಗೆಯಾಗಿ ಕಂಗೊಳಿಸುವ ನೂತನ್ ಕ್ಲೋತ್ ಸೆಂಟರ್ ಮಡಂತ್ಯಾರು ನವರಾತ್ರಿಯ ನವೋಲ್ಲಾಸಕ್ಕೆ ನವವರ್ಣದ ನವರಂಗಿ ಸೀರೆ ಸ್ಪರ್ಧೆಯನ್ನು ಏರ್ಪಡಿಸುತ್ತಿರುವುದು ಹೆಂಗಳೆಯರ ಖುಷಿಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ.