ಮಂಗಳೂರು, ಅ. 22 (DaijiworldNews/ TA): ಆರೆಸ್ಸೆಸ್ ವಿಚಾರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ನೀಡುತ್ತಿರುವ ಹೇಳಿಕೆಗಳ ಬಗ್ಗೆ ಶಾಸಕ ಡಾ. ಭರತ್ ಶೆಟ್ಟಿ ನಗರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರವು ರಾಜ್ಯವನ್ನು ಅಧಃಪತನಕ್ಕೆ ಕೊಂಡೊಯ್ಯುತ್ತಿದೆ. ಸದ್ಯ ಈ ವಿಚಾರವನ್ನು ಮರೆಮಾಚುವ ಸಲುವಾಗಿ ಸರ್ಕಾರ ಒಂದಿಲ್ಲೊಂದು ವಿಚಾರಗಳನ್ನು ಮುನ್ನೆಲೆಗೆ ತರುತ್ತಿದೆ. ದೇಶದಲ್ಲಿ ಎಲ್ಲೇ ಅವಘಡ ಸಂಭವಿಸಿದರೂ ಆರೆಸ್ಸೆಸ್ ಮೊದಲಾಗಿ ಆ ಜಾಗಕ್ಕೆ ಬಂದು ರಕ್ಷಣಾ ಕಾರ್ಯಾಚರಣೆ ನಡೆಸುತ್ತದೆ. ಆರೆಸ್ಸೆಸ್ ಶಾಖೆಯಲ್ಲಿ ಭಾರತ್ ಮಾತಾ ಕೀ ಘೋಷಣೆ ಕೂಗಲಾಗುತ್ತದೆ. ಅಲ್ಲದೆ ದೇಶವೇ ಮೊದಲು ಎಂದು ತಿಳಿಸಿಕೊಡಲಾಗುತ್ತದೆ. ಹಾಗಾಗಿ ಆರೆಸ್ಸೆಸ್ ದೇಶಭಕ್ತರ ಸಂಘಟನೆಯಾಗಿದೆ.

ಈ ದೇಶಭಕ್ತ ಸಂಘಟನೆಯ ಮೇಲೆ ಪ್ರಿಯಾಂಕ ಖರ್ಗೆ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರಿಗೆ ಚಿತ್ತ ನೆಟ್ಟಿದ್ದಾರೆ. ಅವರ ಪ್ರಕಾರ ದೇಶದಲ್ಲಿ ಜಿಹಾದಿ ಶಕ್ತಿಗಳು ಹುಟ್ಟಿಕೊಂಡರೆ ಒಳ್ಳೆಯದು, ಆದರೆ ಭಾರತ್ ಮಾತಾ ಕೀ ಜೈ ಎನ್ನುವ ಸಂಘಟನೆಗಳು ಇರಬಾರದು ಎನ್ನುವ ವಿಚಾರಧಾರೆ ಅವರಲ್ಲಿದೆ. ಸಾರ್ವಜನಿಕ ಜಾಗದಲ್ಲಿ ನಮಾಝ್ ಮಾಡಿದರೂ ಅದರ ಬಗ್ಗೆ ಕಾಂಗ್ರೆಸಿಗರು ಮಾತನಾಡುವುದಿಲ್ಲ.
ಇಡೀ ಬೆಂಗಳೂರಿನ ರಸ್ತೆಗಳು ಹೊಂಡಗಳಿಂದ ತುಂಬಿಹೋಗಿದೆ. ಆದರೆ ಸಮಸ್ಯೆ ಬಗ್ಗೆ ಮಾತನಾಡುವವರ ಬಾಯಿ ಮುಚ್ಚಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆಯೇ ವಿನಹ ಸಮಸ್ಯೆಗೆ ಪರಿಹಾರ ಕಲ್ಪಿಸುತ್ತಿಲ್ಲ. ರಾಜ್ಯದ ಅಭಿವೃದ್ದಿ ಬಗ್ಗೆ ಸರ್ಕಾರ ಗಮನ ಹರಿಸಲಿ, ಅದು ಬಿಟ್ಟು ಇಲ್ಲಸಲ್ಲದ ಮಾತುಗಳನ್ನು ಆಡುವುದನ್ನು ಸರ್ಕಾರ ಬಿಡಲಿ ಎಂದು ಭರತ್ ಶೆಟ್ಟಿ ತಿಳಿಸಿದರು.