ಬಂಟ್ವಾಳ, ಅ. 23 (DaijiworldNews/ TA): ದೀಪಾವಳಿ ಸಮಯದಲ್ಲಿ ಬಲಿಪಾಡ್ಯಮಿಯನ್ನು ಆಚರಿಸುವ ಸಂಪ್ರದಾಯ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಕೃಷಿ ಕುಟುಂಬಗಳಲ್ಲಿಆಚರಿಸಿಕೊಂಡು ಬರಲಾಗುತ್ತಿದೆ. ಈ ಪೈಕಿ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ಸೌತೆಬಳ್ಳಿ ಸಂಕಪ್ಪ ಮೂಲ್ಯ ಮತ್ತು ಸಹೋದರರ ಅವರ ಮನೆಯಲ್ಲಿ ಬಲಿಪಾಡ್ಯಮಿಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ.



ಸೌತೆಬಳ್ಳಿ ದಿ.ದುಗ್ಗಣ್ಣ ಮೂಲ್ಯ ಎಂಬವರ ಮನೆ ಇದಾಗಿದ್ದು, ಕೂಡು ಕುಟುಂಬವಾಗಿತ್ತು. ಅವರ ಜೀವಿತದ ಕಾಲದಲ್ಲಿ ಬಲಿಪಾಡ್ಯಮಿಯನ್ನು ಆಚರಿಸುವ ಕ್ರಮವನ್ನು ಅನುಸರಿಸಿ ಈಗಲೂ ಮುಂದುವರಿಸಿಕೊಂಡು ಬಂದಿದ್ದಾರೆ. ಸೌತೆಬಳ್ಳಿ ಕುಟುಂಬದವರು ಇಂದಿಗೂ ಭತ್ತದ ಕೃಷಿ ಮಾಡುತ್ತಿದ್ದು ದೀಪಾವಳಿ ಹಬ್ಬದ ಸಮಯದಲ್ಲಿ ಕುಟುಂಬದ ಸದಸ್ಯರು ಒಟ್ಟು ಸೇರುತ್ತಾರೆ. ಬಲಿಪಾಡ್ಯಮಿಯ ದಿನ ಬೆಳಿಗ್ಗೆ ಗೋವುಗಳನ್ನು ಸ್ನಾನ ಮಾಡಿಸಿ ಸಂಜೆ ವೇಳೆ ಪೂಜೆ ಮಾಡಿ ತಿನ್ನಲು ದೋಸೆ ನೀಡುತ್ತಾರೆ. ಬಳಿಕ ಕುಟುಂಬದ ಸದಸ್ಯರು ಜೊತೆಯಾಗಿ ಗದ್ದೆಯ ಬದಿಯಲ್ಲಿ ಅಂದರೆ ತುಳುವಿನಲ್ಲಿ ಹೇಳುವ ಕಂಡದ ಕಟ್ಟಪುಣಿಯಲ್ಲಿ ಬಲಕೆ ಮರದಲ್ಲಿ ದೀಪ ಉರಿಸುತ್ತಾರೆ. ಬಲಿದೇವರಿಗೆ ಪಂಚಕಜ್ಜಾಯ ಹಾಗೂ ಎಲೆಅಡಿಕೆಯನ್ನು ಅಲ್ಲಿ ಇಡಲಾಗುತ್ತದೆ.
ಅ ನಂತರ ಎಲ್ಲರೂ ಒಂದಾಗಿ ಬಲಿಯೇಂದ್ರ ಕಥೆಯನ್ನು ಓದಿ ಮೂರು ಬಾರಿ ಕೂ ಎಂದು ಹೇಳುವ ಸಂಪ್ರದಾಯ ಇದೆ. ಈ ಬಾರಿ ಅತಿಯಾದ ಮಳೆಯ ಕಾರಣ ಆಚರಣೆಗೆ ತೊಡಕಾಗಿದೆಯಾದರೂ ಛತ್ರಿ ಹಿಡಿದುಕೊಂಡು ಬಲಿಪಾಡ್ಯಮಿಯನ್ನು ಆಚರಿಸಿದ್ದೇವೆ ಎಂದು ಮನೆಯವರು ತಿಳಿಸಿದ್ದಾರೆ. ತುಳುನಾಡಿನ ಸಾಂಪ್ರದಾಯಿಕ ಆಚರಣೆಯನ್ನು ಮುಂದುವರೆಸಿಕೊಂಡು ಬರಲಾಗುತ್ತಿರುವುದು ಶ್ಲಾಘನೀಯವೇ ಸರಿ.