ಸುಳ್ಯ, ಅ. 23 (DaijiworldNews/ TA): ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಕಳಪೆ ಕಾಮಗಾರಿ ನಡೆಸಿದರೆ ಅಂಥ ಗುತ್ತಿಗೆದಾರರನ್ನು ಮುಲಾಜಿಯಿಲ್ಲದೆ ಕಪ್ಪು ಪಟ್ಟಿಗೆ ಸೇರಿಸಿ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಸೂಚನೆ ನೀಡಿದ್ದಾರೆ.

ಸುಳ್ಯ ನಗರ ಪಂಚಾಯತ್ ಗೆ ಆಗಮಿಸಿದ ಅವರು ನಗರ ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು. ರಾಜಕೀಯ ಭೇದ ಮರೆತು ಎಲ್ಲರೂ ಕೆಲಸ ಮಾಡಬೇಕು. ಕಾಮಗಾರಿ ಅನುಷ್ಠಾನ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯರು ಗಮನ ಹರಿಸಬೇಕು.15ನೇ ಹಣಕಾಸು ಯೋಜನೆ, ತೆರಿಗೆ ಸಂಗ್ರಹ, ಒಣಕಸ ಮತ್ತು ಹಸಿ ಕಸ ವಿಲೇವಾರಿ, ಸ್ವಚ್ಛ ಭಾರತ್ ಮಿಷನ್, ಅಮೃತ್ ಯೋಜನೆ, ಮುಖ್ಯಮಂತ್ರಿ ನಗರೋತ್ಥಾನ ಯೋಜನೆ, ವಸತಿ ಯೋಜನೆ ಹಾಗು ರಾಜ್ಯ ಹಣಕಾಸು ಅನುದಾನ ಹಾಗೂ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿ ಸಲಹೆ ಸೂಚನೆ ನೀಡಿದರು.
ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ಮುಟ್ಟಿಸದೇ ಇದ್ದರೆ ಅದು ದೊಡ್ಡ ಅನ್ಯಾಯ ಆಗುತ್ತದೆ ಎಂದು ಅವರು ಹೇಳಿದರು. 15 ನೇ ಹಣಕಾಸು ಯೋಜನೆಯಲ್ಲಿ ಶೇ.30ರಷ್ಟನ್ನು ಸ್ವಚ್ಛತೆಗೆ ಉಪಯೋಗಿಸಬೇಕು ಎಂದು ಅವರು ಸೂಚಿಸಿದರು.