ಬಂಟ್ವಾಳ, ಅ. 25(DaijiworldNews/ TA): 25 ನೇ ವರ್ಷದ ಸಂಭ್ರಮದಲ್ಲಿರುವ ಕಲ್ಲಡ್ಕದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ನಿಂದ ರಜತ ಕಲಾಯಾನ ಕಾರ್ಯಕ್ರಮಗಳು ವರ್ಷವಿಡೀ ನಡೆಯಲಿದ್ದು, ಮೊದಲ "ಭರತನಾಟ್ಯ ಮಾರ್ಗಂ" ನೃತ್ಯ ಕಾರ್ಯಕ್ರಮವು ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಅಕ್ಟೋಬರ್ 26ರಂದು ಸಂಜೆ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ನಿರ್ದೇಶಕಿ ವಿದುಷಿ ವಿದ್ಯಾ ಮನೋಜ್ ತಿಳಿಸಿದ್ದಾರೆ.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2001ರ ಅಕ್ಟೋಬರ್ 26ರಂದು ಸಂಸ್ಥೆಯ ನೇತೃತ್ವದಲ್ಲಿ ಬೆಳ್ತಂಗಡಿಯಲ್ಲಿ ಭರತನಾಟ್ಯ ತರಬೇತಿ ಆರಂಭಗೊಂಡಿತ್ತು. ಇದೀಗ ಕಲ್ಲಡ್ಕ ಹಾಗೂ ಬಿ.ಸಿ.ರೋಡ್ ನಲ್ಲಿಯೂ ಶಾಖೆಗಳಿದ್ದು, ಈವರೆಗೆ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. 23 ಮಂದಿ ವಿದ್ವತ್ ಪದವಿ ಗಳಿಸಿದ್ದು, ವಿಶ್ವದ ನಾನಾ ಕಡೆಗಳಲ್ಲಿ ಉದ್ಯೋಗಗಳನ್ನು ನಿರ್ವಹಿಸಿಕೊಂಡಿದ್ದಾರೆ ಎಂದರು. ಸಂಸ್ಥೆಯ ಮಾರ್ಗದರ್ಶನದಲ್ಲಿ ವಿದ್ವತ್ ಪಡೆದುಕೊಂಡವರ ಪೈಕಿ 20 ಮಂದಿ ಕಲಾವಿದರು ಅ.26ರಂದು ಪ್ರದರ್ಶನ ನೀಡಲಿದ್ದಾರೆ.
ರಜತ ಕಲಾಯಾನ ಶೀರ್ಷಿಕೆಯೊಂದಿಗೆ ನಡೆಯುವ 25ರ ಸಂಭ್ರಮದ ಅಂಗವಾಗಿ ವರ್ಷವಿಡೀ ಹಲವು ಕಾರ್ಯಕ್ರಮ, ಕಾರ್ಯಾಗಾರಗಳನ್ನು ನಡೆಸಿಕೊಡಲಾಗುವುದು ಎಂದರು. ಚಕ್ರಪಾಣಿ ನೃತ್ಯಕಲಾಕೇಂದ್ರದ ನಿರ್ದೇಶಕ ಸುರೇಶ್ ಅತ್ತಾವರ, ಚಿತ್ರನಿರ್ದೇಶಕ ಸ್ಮಿತೇಶ್ ಎಸ್. ಬಾರ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಡಾ. ಮನೋಜ್ ಕಲ್ಲಡ್ಕ, ಪೋಷಕರಾದ ಲಕ್ಷ್ಮಣ ಅಗ್ರಬೈಲ್, ತಿರುಮಲೇಶ್ವರ ಭಟ್ ಕಲ್ಲಡ್ಕ, ಆಶಾ ರೈ ಉಪಸ್ಥಿತರಿದ್ದರು.