ಬಜ್ಪೆ, ಅ. 25(DaijiworldNews/ TA): ಪೆರ್ಮುದೆ ಬಂಡಸಾಲೆಯ ಬಳಿಯ ಮನೆಯೊಂದರ ಬೀಗ ಮುರಿದು ಒಳನುಗ್ಗಿದ ಕಳ್ಳರು, ಮನೆಯೆಲ್ಲ ಜಾಲಾಡಿ ಬರಿಗೈಯಲ್ಲಿ ಮರಳಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಶಿಕ್ಷಕಿ ಶೋಭಾ ಬ್ರಿಟೋ ಅವರು ಅ.22ರಂದು ತಾಯಿಯ ಮನೆಗೆ ತೆರಳಿದ್ದಾಗ ಅವರ ಮನೆಗೆ ಕಳ್ಳರು ನುಗ್ಗಿದ್ದಾರೆ. ಕಳ್ಳರು ರಾತ್ರಿ 10ರಿಂದ 11ರ ವರೆಗೆ ಮನೆಯಲ್ಲಿದ್ದುದು ಸಿಸಿ ಕೆಮರಾದಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ.

ಅ.23ರಂದು ರಾತ್ರಿ ಅಲ್ಲಿಯೇ ಸಮೀಪದ ಗುಜರಿ ಅಂಗಡಿಯ ಶಟರ್ ಮುರಿಯಲು ಕೂಡ ಯತ್ನಿಸಲಾಗಿದೆ. ಮಾರ್ಚ್ 31ರಂದು ಪೆರ್ಮುದೆ ಪೇಟೆಯ ಮನೆಯಿಂದ ಸುಮಾರು 2 ಕೆ.ಜಿ. ಚಿನ್ನಾಭರಣ ಸಹಿತ ಕೋಟ್ಯಂತರ ರೂಪಾಯಿ ಮೌಲ್ಯದ ಸೊತ್ತು ಕಳವಾದ ಪ್ರಕರಣವನ್ನು ಇನ್ನೂ ಭೇದಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಈ ನಡುವೆ ಮತ್ತೆ ಕಳವು ಯತ್ನ ನಡೆದಿರುವುದು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ.
ಶಿಕ್ಷಕಿ ಅ.23ರಂದು ಸಂಜೆ ಶಾಲೆಯಿಂದ ಮನೆಗೆ ಬಂದಾಗ ಈ ಕಳವು ಬಗ್ಗೆ ಮಾಹಿತಿ ತಿಳಿದು ಬಂದಿದೆ. ಮನೆಯೆಲ್ಲ ಜಾಲಾಡಿದ ಕಳ್ಳರಿಗೆ ಯಾವುದೇ ಆಭರಣ ಸಿಗದಿರುವುದು ಹಾಗೂ ಅಲ್ಲಿದ್ದ ಲ್ಯಾಪ್ಟಾಪ್ನ್ನು ಕಳವು ಮಾಡದೇ ಇರುವುದು ಕಂಡು ಬಂದಿದೆ. ಅ.23ರಂದು ರಾತ್ರಿ ಅಲ್ಲಿಯೇ ಪಕ್ಕದ ಗುಜರಿ ಅಂಗಡಿಯ ಶಟರ್ನ್ನು ಮುರಿಯುವ ವಿಫಲ ಪ್ರಯತ್ನ ಕಳ್ಳರು ಮಾಡಿರುವುದು ಕಂಡು ಬಂದಿದೆ. ಪೆರ್ಮುದೆಯಲ್ಲಿ ಕಳ್ಳರ ಹಾವಳಿ ಜಾಸ್ತಿಯಾಗುತ್ತಿರುವುದು ಜನರ ನಿದ್ದೆ ಗೆಡಿಸಿದೆ.