ಮಂಗಳೂರು, ಅ. 26 (DaijiworldNews/AA): ದಾಯ್ಜಿವರ್ಲ್ಡ್ ಮೀಡಿಯಾ, ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿ (ಎಂಐಒ) ಜಂಟಿ ಆಯೋಜನೆಯಲ್ಲಿ ವರ್ಷಪೂರ್ತಿ ನಡೆಯಲಿರುವ ಕ್ಯಾನ್ಸರ್ ಜಾಗೃತಿ ಅಭಿಯಾನಕ್ಕೆ ಮಂಗಳೂರಿನಲ್ಲಿ ಅಧಿಕೃತ ಚಾಲನೆ ನೀಡಲಾಯಿತು.
























ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, ಎಂಐಒ ನಿರ್ದೇಶಕ ಡಾ. ಸುರೇಶ್ ರಾವ್, ದಾಯ್ಜಿವರ್ಲ್ಡ್ ಮಾಧ್ಯಮ ಸಂಸ್ಥೆಗಳ ಸಂಸ್ಥಾಪಕ ವಾಲ್ಟರ್ ನಂದಳಿಕೆ ಪ್ರಮುಖರಾಗಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಕ್ಯಾನ್ಸರ್ ತಡೆಗಟ್ಟುವಿಕೆ, ಚಿಕಿತ್ಸೆ ಮತ್ತು ಚೇತರಿಕೆ ಬಗ್ಗೆ ನಾಗರಿಕರಲ್ಲಿ ಜಾಗೃತಿಯ ಜೊತೆಗೆ ಸಕಾರಾತ್ಮಕತೆಯನ್ನು ಹುಟ್ಟಿಸುವ ನಿಟ್ಟಿನಲ್ಲಿ ನಡೆಯುವ ಈ ಕಾರ್ಯಕ್ರಮವು ಅತ್ಯಂತ ಪ್ರೇರಣಾತ್ಮಕವಾಗಿದ್ದು ಎಲ್ಲಾ ರೀತಿಯ ಪ್ರಶಂಸೆಗೆ ಅರ್ಹವಾಗಿದೆ ಎಂದರು. ಸಕಾರಾತ್ಮಕ ಚಿಂತನೆಗಳಿಂದ ಕ್ಯಾನ್ಸರ್ ಭಾದಿತರನ್ನು ರೋಗಮುಕ್ತಗೊಳಿಸುವ ದಾಯ್ಜಿವರ್ಲ್ಡ್ ಮತ್ತು ಎಂಐಒ ಆಸ್ಪತ್ರೆಯ ಜಂಟಿ ಪ್ರಯತ್ನವನ್ನು ಶ್ಲಾಘಿಸಿದ ಅವರು, ಕ್ಯಾನ್ಸರ್ ಗೆಲ್ಲೋಣ ಅಭಿಯಾನಕ್ಕೆ ಶುಭ ಹಾರೈಸಿದರು.
ಇನ್ನು ಪ್ರಾಸ್ತವಿಕ ಮಾತುಗಳನ್ನಾಡಿದ ದಾಯ್ಜಿವರ್ಲ್ಡ್ ಮಾಧ್ಯಮ ಸಂಸ್ಥೆಗಳ ಸಂಸ್ಥಾಪಕ ವಾಲ್ಟರ್ ನಂದಳಿಕೆ ಅವರು, "ದಾಯ್ಜಿವರ್ಲ್ಡ್.ಕಾಂ ಇದರ ಬೆಳ್ಳಿಹಬ್ಬದ ಆಚರಣೆಯ ಭಾಗವಾಗಿ ಸಂಸ್ಥೆಯು ಹಲವು ಸರಣಿ ಕಾರ್ಯಕ್ರಮಗಳನ್ನ ಆಯೋಜಿಸಿದೆ. ಕ್ಯಾನ್ಸರ್ ಗೆಲ್ಲೋಣ ಇವುಗಳಲ್ಲಿ ಒಂದಾಗಿದ್ದು ವರ್ಷಪೂರ್ತಿ ಕ್ಯಾನ್ಸರ್ ತಡೆಗಟ್ಟುವಿಕೆ ಹಾಗೂ ಗುಣಪಡಿಸುವಿಕೆಯ ಕಾರ್ಯಕ್ರಮಗಳು ಮೂಡಿಬರಲಿವೆ" ಎಂದರು.
ಡಾಕ್ಟರ್ ಸುರೇಶ್ ರಾವ್ ಮಾತನಾಡಿ, "ಕ್ಯಾನ್ಸರ್ ಬಗ್ಗೆ ಈ ಸಮಾಜದಲ್ಲಿ ವಿಪರೀತ ಭಯದ ವಾತಾವರಣವಿದೆ. ಆರಂಭದ ದಿನಗಳಲ್ಲಿ ಚಿಕಿತ್ಸೆಗಾಗಿ ಹಿಂದೇಟು ಹಾಕುವವರೇ ಹೆಚ್ಚು. ಈ ಮನಸ್ಥಿತಿ ಬದಲಾಗಬೇಕಾಗಿದೆ. ಮೊದಲ ಹಾಗೂ ದ್ವಿತೀಯ ಘಟ್ಟದ ಕ್ಯಾನ್ಸರ್ ರೋಗವನ್ನು ಸುಲಭವಾಗಿ ಗುಣಪಡಿಸಬಹುದು. ಕ್ಯಾನ್ಸರ್ ಎಂದರೆ ಮೃತ್ಯು ಎಂಬ ಚಿಂತನೆ ಬದಲಾಗಿ ಇದು ಗುಣಪಡಿಸಲು ಸಾಧ್ಯವಿರುವ ಕಾಯಿಲೆ ಎಂಬ ಸಕಾರಾತ್ಮಕ ಚಿಂತನೆ ಎಂಬ ಸಂದೇಶ ಸಾರಲು ಎಂಐಒ ದಾಯ್ಜಿವರ್ಲ್ಡ್ ಜೊತೆ ಸೇರಿ ಕ್ಯಾನ್ಸರ್ ಗೆಲ್ಲೋಣ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದೆ" ಎಂದು ತಿಳಿಸಿದರು.
ಎಂಐಒ ನಿರ್ದೇಶಕರಾದ ಡಾ. ಜಲಾಲುದ್ದೀನ್ ಅಕ್ಬರ್, ಡಾ. ರೋಹನ್ ಚಂದ್ರ ಗಟ್ಟಿ ಸೇರಿದಂತೆ ವೈದ್ಯಕೀಯ ವಿದ್ಯಾರ್ಥಿಗಳು, ಆಸ್ಪತ್ರೆ ಸಿಬ್ಬಂದಿಗಳು, ಆರೋಗ್ಯ ರಂಗದ ಪ್ರಮುಖರು, ಕ್ಯಾನ್ಸರ್ ಕಾಯಿಲೆಯಿಂದ ಮುಕ್ತರಾದವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.