ಕುಂದಾಪುರ, ಅ. 26 (DaijiworldNews/TA): ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಭಿವೃದ್ಧಿ ಪಥಕ್ಕೆ ಸುವರ್ಣ ಮಹೋತ್ಸವ ಮುನ್ನುಡಿ ಬರೆಯಲಿ ಎಂದು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಬಯಲು ರಂಗಮಂದಿರದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಸಭಾಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಸುವರ್ಣ ಪಥ ಮುಖಪುಟ ಬಿಡುಗಡೆಗೊಳಿಸಿ ಮಾತನಾಡಿ, ಒಂದು ಪಟ್ಟಣಪಂಚಾಯತ್ ಅಭಿವೃದ್ಧಿ ಹೊಂದಬೇಕಾದರೆ ಆ ಕಾಲಘಟ್ಟದಲ್ಲಿ ಆಡಳಿತದಲ್ಲಿರುವ ಸರಕಾರಗಳ ಅನುದಾನದ ಮೇಲೆ ಅವಲಂಬಿತವಾಗುವುದಲ್ಲದೆ ಪ್ರಸ್ತುತ ಶಾಸಕರಾಗಿ ಅನುದಾನದ ಕೊರತೆ ಎದುರಿಸುತ್ತಿದ್ದೇವೆ.
ಈ ದಿಸೆಯಲ್ಲಿ ಸುವರ್ಣ ಮಹೋತ್ಸವದ ಅಂಗವಾಗಿ ಒಂದಿಷ್ಟು ಯೋಜನೆ ಯೋಚನೆಗಳನ್ನಿರಿಸಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿ ಹೊಸಭಾಷ್ಯ ಬರೆದಿದೆ ಇದು ಪ್ರಶಂಸನೀಯ ಕಾರ್ಯ ಎಂದು ಸುವರ್ಣ ಮಹೋತ್ಸವಕ್ಕೆ ಶುಭಹಾರೈಸಿದರು. ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಭೆಯಲ್ಲಿ ಹಿರಿಯ ಸಾಧಕರಾದ ಕೆ. ತಾರಾನಾಥ ಹೊಳ್ಳ,ನಾರಾಯಣ ಆಚಾರ್,ಪಿ ನರಸಿಂಹ ಐತಾಳ್, ಗುಂಡ್ಮಿ ರಾಮಚಂದ್ರ ಐತಾಳ್,ಪದ್ಮನಾಭ ಶೆಟ್ಟಿಗಾರ್,ಡಾ.ಹರೀಷ್ ಇವರನ್ನು ವಿಶೇಷವಾಗಿ ಗೌರವಿಸಲಾಯಿತು. ಅಲ್ಲದೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.