ಉಳ್ಳಾಲ, ಅ. 31(DaijiworldNews/TA): ಸ್ಪೀಕರ್ ಖಾದರ್ ಅವರು ಶಾಸಕರ ಭವನಗಳ ಅಭಿವೃದ್ಧಿ ಹೆಸರಿನಲ್ಲಿ ನಡೆಸಿರುವ ಭ್ರಷ್ಟಾಚಾರ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಹಾಗೂ ಸಾಂವಿಧಾನಿಕ ಗೌರವಾನ್ವಿತ ಪೀಠಕ್ಕೆ ಅಗೌರವ ತಂದಿದೆ. ಈವರೆಗೂ ಆಗದಂತಹ ಭ್ರಷ್ಟಾಚಾರವನ್ನು ಕ್ಷೇತ್ರದ ಶಾಸಕರು ನಡೆಸಿರುವುದು ಕ್ಷೇತ್ರಕ್ಕೆ ಕಪ್ಪುಚುಕ್ಕೆಯಾಗಿದೆ. ಪ್ರಕರಣದ ನ್ಯಾಯಾಂಗ ತನಿಖೆ ನಡೆಯುವವರೆಗೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್ ಹೇಳಿದ್ದಾರೆ.

ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು 4ಜಿ ವಿನಾಯಿತಿಯಲ್ಲಿ ಶಾಸಕರ ಭವನಗಳ ಅಭಿವೃದ್ಧಿ ಕೆಲಸಗಳು ತರಾತುರಿಯಲ್ಲಿ ಯಾಕೆ ನಡೆಸಲಾಯಿತು. ಆರ್ಥಿಕ ಇಲಾಖೆ ಕಾಮಗಾರಿಯನ್ನು ತಿರಸ್ಕಾರ ಮಾಡಿದರೂ, ಮುಖ್ಯಮಂತ್ರಿಗಳೇ ಕಾಮಗಾರಿಗೆ ಒಪ್ಪಿಗೆ ನೀಡಿರುವುದು ಗಂಭೀರ ವಿಚಾರ. ಪ್ರಕೃತಿ ವಿಕೋಪಗಳ ಸಂದರ್ಭ, ತುರ್ತು ಪರಿಸ್ಥಿತಿಯಲ್ಲಿ 4ಜಿ ವಿನಾಯಿತಿ ನಡೆಸಿ ಕಾಮಗಾರಿ ನಡೆಸಲಾಗುತ್ತದೆ. ಆದರೆ ಎಲ್ಲಾ ವ್ಯವಸ್ಥೆಗಳಿರುವ ಶಾಸಕರ ಭವನಗಳ ಅಭಿವೃದ್ಧಿಗೆ 4ಜಿ ವಿನಾಯಿತಿ ಯಾವ ಆಧಾರದಲ್ಲಿ ಪಡೆದುಕೊಂಡಿರಿ?. ಟೆಂಡರ್ ಕರೆಯುವುದು ಸೇರಿದಂತೆ ಕಾಮಗಾರಿ ನಿರ್ವಹಿಸುವಾಗ ಅದಕ್ಕಾದ ನಿಯಮಗಳಿತ್ತು ಅವೆಲ್ಲವನ್ನು ಗಾಳಿಗೆ ತೂರಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಲಾಗಿದೆ.
ಸರಕಾರದ ಪ್ರಧಾನ ಕಾರ್ಯದರ್ಶಿಗಳು ಇಂತಹ ಕಾಮಗಾರಿಗೆ ಒಪ್ಪಿಗೆ ಸೂಚಿಸಿರುವುದು ಯಾವ ಆಧಾರದ ಮೇಲೆ ಎಂಬುದು ಗೊತ್ತಾಗುತ್ತಿಲ್ಲ. ಕುಡಿಯುವ ನೀರು ಕಾಮಗಾರಿ ನಿರ್ವಹಣೆಯಲ್ಲಿ ರಸ್ತೆಗಳೆಲ್ಲವನ್ನೂ ಕೆಡವಿ ಹೊಂಡಮಯ ರಸ್ತೆಗಳಿಂದ ಕ್ಷೇತ್ರ ಕೂಡಿದೆ. ಸ್ಪೀಕರ್ ತಮ್ಮ ಅವ್ಯವಹಾರಗಳ ಕುರಿತು ಸಮರ್ಥನೆ ನೀಡದೆ ತನಿಖೆಗೆ ಸಹಕರಿಸಬೇಕು. ಅಲ್ಲಿಯವರೆಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಸುದ್ಧಿಗೋಷ್ಠಿಯಲ್ಲಿ ಬಿಜೆಪಿ ಮಂಗಳೂರು ಮಂಡಲದ ಪ್ರ.ಕಾ ದಯಾನಂದ ತೊಕ್ಕೊಟ್ಟು, ಉಪಾಧ್ಯಕ್ಷರಾದ ಸುರೇಶ್ ಆಳ್ವ, ಹುಕ್ರಪ್ಪ ನಾಯ್ಕ್ ಉಪಸ್ಥಿತರಿದ್ದರು.