ಬಂಟ್ವಾಳ, ಅ. 31 (DaijiworldNews/AA): ಪಾಣೆಮಂಗಳೂರು ಹಳೆ ಸೇತುವೆಯ ಮೇಲೆ ಬುಧವಾರ ಬೆಳಗ್ಗೆ ಆಟೋ ರಿಕ್ಷಾವನ್ನು ನಿಲ್ಲಿಸಿ ಕಾಣೆಯಾಗಿದ್ದ ಚಾಲಕನ ಮೃತದೇಹ ಗುರುವಾರ ತುಂಬೆಯ ಕಿಂಡಿ ಅಣೆಕಟ್ಟಿನ ಬಳಿ ಪತ್ತೆಯಾಗಿದೆ.

ಮೃತರನ್ನು ಸಜೀಪಮುನ್ನೂರು ಗ್ರಾಮದ ಮಾರ್ನಬೈಲು ನಿವಾಸಿ, ಪೀಟರ್ ಲೋಬೋ (52) ಎಂದು ಗುರುತಿಸಲಾಗಿದೆ.
ಪೀಟರ್ ಅವರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು ಮತ್ತು ತೀವ್ರ ಖಿನ್ನತೆಗೆ ಒಳಗಾಗಿದ್ದರು. ತಾನು ಯಾರನ್ನು ಅವಲಂಬಿಸುವಂತೆ ಆಗಬಾರದೆಂದು ತೀರ್ಮಾನಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೀಟರ್ ಲೋಬೋ ಅವರ ಪತ್ನಿ ಅನಿತಾ ಲೋಬೊ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 29 ರಂದು ಬೆಳಿಗ್ಗೆ ಸುಮಾರು 5:10ಕ್ಕೆ, ಪೀಟರ್ ಅವರು ತಮ್ಮ ಆಟೋ-ರಿಕ್ಷಾದಲ್ಲಿ ಮನೆಯಿಂದ ಹೊರಟು ಸೇತುವೆ ಮೇಲೆ ವಾಹನ ನಿಲ್ಲಿಸಿ ನದಿಗೆ ಹಾರಿದ್ದರು. ದಿನವಿಡೀ ಸ್ಥಳೀಯ ಈಜುಗಾರರು ಮತ್ತು ಬಂಟ್ವಾಳ ಅಗ್ನಿಶಾಮಕ ಮತ್ತು ರಕ್ಷಣಾ ದಳದವರು ವ್ಯಾಪಕ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಿರಲಿಲ್ಲ. ಗುರುವಾರ ಮುಂದುವರಿದ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.