ಬಂಟ್ವಾಳ, ಅ. 31(DaijiworldNews/TA): ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳದ ಮಾಣಿಯಲ್ಲಿ ಕಳೆದ ಕೆಲ ಸಮಯದಿಂದ ನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದ್ದು ಅವೈಜ್ಞಾನಿಕ ಮಾದರಿಯಲ್ಲಿ ಕಾಮಗಾರಿ ನಡೆಸುತ್ತಿರುವುದೇ ಸಮಸ್ಯೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಆಂಬ್ಯುಲೆನ್ಸ್ ವಾಹನಗಳ ಸಹಿತ ತುರ್ತು ತೆರಳುವ ವಾಹನಗಳು ಬಾಕಿಯಾಗಿರುವ ಘಟನೆಗಳು ನಡೆದಿದ್ದು, ಬೆಳಗ್ಗೆ ಹಾಗೂ ಸಂಜೆ ಶಾಲಾ ಮಕ್ಕಳಿಗೆ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿರುವ ಬಗ್ಗೆ ಪೋಷಕರು ಕೂಡ ಆರೋಪ ಮಾಡಿದ್ದಾರೆ. ಕಿರಿದಾದ ಸರ್ವೀಸ್ ರಸ್ತೆಯ ಒಂದು ಬದಿಯಲ್ಲಿ ಮಾತ್ರ ಸದ್ಯ ಪುತ್ತೂರು ಮೈಸೂರು ಭಾಗಕ್ಕೆ ತೆರಳಲು ಅವಕಾಶ ಇದ್ದು, ಇಲ್ಲಿ ನಿತ್ಯ ವಾಹನಗಳು ಸಿಲುಕಿಕೊಂಡು ಟ್ರಾಫಿಕ್ ಜಾಮ್ ಸಮಸ್ಯೆ ಆಗುತ್ತಿದೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ಮಾಣಿ ಅಂಡರ್ ಪಾಸ್ ನ ಬಳಿಯಿಂದ ಅರ್ಧ ಪರ್ಲಾಂಗ್ ನಷ್ಟು ಪುತ್ತೂರು ರಸ್ತೆಯ ಒಂದು ಭಾಗವನ್ನು ಅಗೆಯಲಾಗಿದೆ.
ಅಗೆದು ತಿಂಗಳು ಆಗುತ್ತಾ ಬಂದರೂ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ. ಹಾಗಾಗಿ ಇಲ್ಲಿ ನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ. ಬೇಕಾಬಿಟ್ಟಿಯಾಗಿ ಅಲ್ಲಲ್ಲಿ ಅಗೆಯುದ್ದಲ್ಲದೆ ಮಾಣಿಯಲ್ಲಿ ಚರಂಡಿ ಕಾಮಗಾರಿಗಾಗಿ ಅಗೆಯಲಾದ ಗುಂಡಿಗಳು ಹಾಗೆಯೇ ಬಾಯ್ತೆರೆದು ಉಳಿದುಕೊಂಡು, ನೀರು ತುಂಬಿಕೊಂಡಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಒಟ್ಟಾರೆಯಾಗಿ ಮಾಣಿ ಎಂಬುದು ಸದ್ಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡ KNRC ಕಂಪೆನಿಯ ಕೈಯೊಳಗೆ ಇರುವ ಆಟದ ಸಾಮಾಗ್ರಿಯಂತಾಗಿದೆ ಎಂದು ಆರೋಪ ಮಾಡಿದ್ದಾರೆ.