ಮಂಗಳೂರು, ಅ. 31 (DaijiworldNews/AA): ರಸ್ತೆಗಳಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲುಗಡೆಗೊಳಿಸಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ, ಮಂಗಳೂರು ನಗರದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಮಂಗಳೂರು ನಗರ ಪೊಲೀಸರು ಕಳೆದ ಮೂರು ತಿಂಗಳಿಂದ ವಿಶೇಷ ಕಾರ್ಯಾಚರಣೆಗಳನ್ನು ಕೈಗೊಂಡಿದ್ದಾರೆ.

ಕಳೆದ ಮೂರು ತಿಂಗಳಲ್ಲಿ ವಿಶೇಷ ಕಾರ್ಯಾಚರಣೆಯ ಸಮಯದಲ್ಲಿ ಪೊಲೀಸರು, 'ನೋ ಪಾರ್ಕಿಂಗ್, ರಾಂಗ್ ಪಾರ್ಕಿಂಗ್, ಡಬಲ್ ಪಾರ್ಕಿಂಗ್, ಫುಟ್ಪಾತ್ ಪಾರ್ಕಿಂಗ್' ಮಾಡಿದ ವಾಹನ ಮಾಲಕ ಮತ್ತು ಚಾಲಕರ ವಿರುದ್ಧ 4793 ಪ್ರಕರಣಗಳನ್ನು ದಾಖಲಿಸಿ ರೂ. 23,21,200 ರೂ. ದಂಡವನ್ನು ವಿಧಿಸಲಾಗಿದೆ.
ಕೆಲವು ವಾಣಿಜ್ಯ ಸಂಕೀರ್ಣ ಮತ್ತು ದೊಡ್ಡ ವ್ಯಾಪಾರ ಮಳಿಗೆಗಳಿಂದ ಸಂಚಾರಕ್ಕೆ ಅಡಚಣೆಯಾಗುತ್ತಿರುವುದರಿಂದ, ಅವುಗಳ ನಿರ್ವಹಣಾ ಮಂಡಳಿಗಳೊಂದಿಗೆ ಸಭೆಗಳನ್ನು ನಡೆಸಲಾಗಿದೆ. ಈ ಮೂಲಕ ಸೂಕ್ತ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿ ನೋಟಿಸ್ ಜಾರಿಗೊಳಿಸಲಾಗಿದೆ.
ಅಪಘಾತಗಳನ್ನು ತಡೆಯುವ ಪ್ರಯತ್ನದಲ್ಲಿ, ಬ್ಲಾಕ್ ಸ್ಪಾಟ್ಗಳ (ಹೆಚ್ಚು ಅಪಘಾತಗಳಾಗುವ ಪ್ರದೇಶಗಳು) ಬಳಿ ಅತೀ ವೇಗವಾಗಿ ಚಾಲನೆ ಮಾಡುವ ವಾಹನಗಳ ವಿರುದ್ಧ ಕ್ರಮ ಕೈಗೊಂಡು 562 ಪ್ರಕರಣಗಳನ್ನು ದಾಖಲಿಸಿ 5,62,000 ರೂ. ದಂಡವನ್ನು ವಿಧಿಸಲಾಗಿದೆ.
ಅದೇ ರೀತಿ, ಟಿಂಟೆಡ್ ಗ್ಲಾಸ್ಗಳನ್ನು ಹೊಂದಿರುವ ವಾಹನಗಳ ವಿರುದ್ಧ ಪೊಲೀಸರು 5,865 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದರ ಮೂಲಕ 24,85,900 ರೂ. ದಂಡ ಸಂಗ್ರಹಿಸಲಾಗಿದೆ. ಸುಪ್ರೀಂ ಕೋರ್ಟ್ನ ಆದೇಶದಂತೆ ಅಂತಹ ವಾಹನಗಳಿಂದ ಟಿಂಟೆಡ್ ಸ್ಟಿಕ್ಕರ್ಗಳನ್ನು ತೆಗೆದುಹಾಕಲಾಗಿದೆ.
ಒಟ್ಟಾರೆಯಾಗಿ, ಈ ಮೂರು ತಿಂಗಳ ಅವಧಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಗಾಗಿ ಮಂಗಳೂರು ಪೊಲೀಸರು 53 ಲಕ್ಷ ರೂ. ಗೂ ಅಧಿಕ ದಂಡವನ್ನು ಸಂಗ್ರಹಿಸಿದ್ದಾರೆ.