ಬಂಟ್ವಾಳ, ನ. 01 (DaijiworldNews/AK): ಕೈಗಾರಿಕಾ ಘಟಕವೊಂದರಲ್ಲಿ ಉತ್ಪತ್ತಿಯಾಗುವ ದ್ರವ ತ್ಯಾಜ್ಯ ನೀರನ್ನು ಸಾರ್ವಜನಿಕ ಪರಂಬೋಕು ತೋಡಿಗೆ ಬಿಡುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಕಾರಣ ಅದನ್ನು ತಡೆಹಿಡಿಯಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.



ಬಂಟ್ವಾಳ ತಾಲೂಕಿನ ಮೂಡುಪಡುಕೋಡಿ ಮತ್ತು ಕಾವಳಪಡೂರು ಗ್ರಾಮದ ಗಡಿಭಾಗದಲ್ಲಿರುವ ಕಾವಳಪಡೂರು ಗ್ರಾಮದ ಬಂಗೇರಕೆರೆ ಎಂಬಲ್ಲಿರುವ ಕೈಗಾರಿಕಾ ಘಟಕದಲ್ಲಿ ಉತ್ಪತ್ತಿಯಾಗುವ ದ್ರವ ತ್ಯಾಜ್ಯ ನೀರನ್ನು ಗ್ರಾಮದ ಅಂಚಿನಲ್ಲಿರುವ ಮೂಡುಪಡುಕೋಡಿ ಗ್ರಾಮದ ಕಡೆ ಮಳೆ ನೀರು ಹರಿಯುವ ಸಾರ್ವಜನಿಕ ಪರಂಬೋಕು ತೋಡಿಗೆ ಬಿಡಲಾಗುತ್ತಿದೆ.
ಘಟಕದ ಸುತ್ತಲಿನ ಕೃಷಿ ಜಮೀನುಗಳಿಗೆ ದ್ರವ ತ್ಯಾಜ್ಯ ಹಾಗೂ ಇತರ ತ್ಯಾಜ್ಯಗಳು ಸೇರಿ ಕೃಷಿ ಚಟುವಟಿಕೆಗೆ ತೊಂದರೆಯುಂಟಾಗುತ್ತಿದ್ದು, ನೀರು ಮಲಿನಗೊಂಡು ದುರ್ವಾಸನೆ ಬರುತ್ತಿರುವುದು ಹಾಗೂ ಅಲ್ಲಿನ ನಿವಾಸಿಗಳಿಗೆ ಮತ್ತು ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ, ಜಾನುವಾರುಗಳಿಗೆ ತೊಂದರೆಯಾಗದಂತೆ ಹಾಗೂ ಆವಶ್ಯಕ ಕಾನೂನು ಕ್ರಮವನ್ನು ಕೈಗೊಳ್ಳುವಂತೆ, ಘಟಕದಿಂದ ಹೊರಬರುವ ದ್ರವತ್ಯಾಜ್ಯ ಹಾಗೂ ಇತರ ತ್ಯಾಜ್ಯಗಳನ್ನು ಪರಂಬೋಕು ತೋಡಿಗೆ ಬಿಡದಂತೆ ಮತ್ತು ವೈಜ್ಞಾನಿಕವಾಗಿ ವಿಲೇವಾರಿಗೊಳಿಸಲು ತುರ್ತಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದು, ಇರ್ವತ್ತೂರು ಗ್ರಾಮ ಪಂಚಾಯತ್ ಆಡಳಿತ ಸಮಿತಿ ಕಾವಳಪಡೂರು ಗ್ರಾಮ ಪಂಚಾಯತ್ಗೆ ಪತ್ರ ಮೂಲಕ ವಿನಂತಿಸಿದೆ.
ಈ ಹಿಂದೆ ಕಾವಳ ಪಡೂರು ಹಾಗೂ ಇರ್ವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸ್ಥಳೀಯ ವಾರ್ಡ್ ಸದಸ್ಯರು ಜಂಟಿ ಪರಿಶೀಲನೆಯನ್ನು ನಡೆಸಿ, ಫ್ಯಾಕ್ಟರಿಯವರಿಗೆ ತುರ್ತಾಗಿ ದ್ರವ ತ್ಯಾಜ್ಯ ಹಾಗೂ ಇತರ ತ್ಯಾಜ್ಯಗಳನ್ನು ವೈಜ್ಞಾನಿಕ ವಿಲೇವಾರಿಗೊಳಿಸಲು ಸೂಚಿಸಲಾಗಿತ್ತು.
ಘಟಕದ ಚಿಮಿಣಿಯಿಂದ ಹೊರಸೂಸುವ ವಾಸನೆಯುಕ್ತ ಹೊಗೆಯಿಂದ ಸುತ್ತಮುತ್ತಲಿನ ಮನೆಗಳಿಗೆ ತೊಂದರೆಯಾಗುತ್ತಿದ್ದು ಈ ಬಗ್ಗೆ ಘಟಕದವರು ಕಾರ್ಯಪ್ರವೃತ್ತರಾಗುವುದಾಗಿ ಮೌಕಿಕವಾಗಿ ತಿಳಿಸಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ತ್ಯಾಜ್ಯ ನೀರಿನ ಸಮಸ್ಯೆಗಳು: ಫ್ಯಾಕ್ಟರಿಯ ಈ ಕೊಳಚೆ ನೀರು ಮೂಡುಪಡುಕೋಡಿಯ ಸಾರ್ವಜನಿಕರಿಗೆ ಸಂಬಂಽತ ತೋಟ ಹಾಗೂ ಗದ್ದೆಗಳಲ್ಲಿ ಶೇಖರವಾಗಿದೆ.
ಬಾವಿ ಹಾಗೂ ಕೊಳಚೆ ನೀರು ಹಾಳಾಗಿರುತ್ತದೆ. ಅರೋಗ್ಯದ ಬಗ್ಗೆ ನೀರಿನ ಗುಣ ಮಟ್ಟದ ಬಗ್ಗೆ ಮಾಹಿತಿ ಇಲ್ಲ.ಅತಿಯಾದ ಹಾನಿಕಾರಕ ದುರ್ಗಂಧ ಭರಿತ ನೀರು ಕೃಷಿ ಜಾಗದಲ್ಲಿ ಶೇಖರಿಸಲ್ಪಟ್ಟಿದ್ದು. ಮನುಷ್ಯ, ಪ್ರಾಣಿ, ಜಲಚರ ಜೀವಕ್ಕೆ ಹಾಗೂ ಕೃಷಿಗೆ ಅಪಾಯಕರವಾಗಿದೆ. ಮಾಲಿನ್ಯ ಮಂಡಳಿ ಈ ಘಟಕಕ್ಕೆ ಅನುಮೋದನೆ ನೀಡುವಾಗ ಮಂಡಳಿ, ಸರಕಾರದ ನಿಯಮಗಳಿಗೆ ಒಳಪಟ್ಟಿರುವ ಬಗ್ಗೆ ಹಾಗೂ ಘಟಕಕ್ಕೆ ಭೇಟಿ ಕೊಡುವ ಬಗ್ಗೆ ಮಾಹಿತಿ ನೀಡಿಲ್ಲ. ಈ ಕೊಳಚೆ ನೀರನ್ನು ಬೇಸಗೆಯಲ್ಲಿ (ಮೂಡುಪಡುಕೋಡಿ ಕಡೆ ಹರಿಯುವ) ರಾಜ ಕಾಲುವೆಗೆ ಬಿಟ್ಟಿದ್ದು. ಈ ಕಾಲುವೆಗೆ ಸಂಬಂಽತ ಕೃಷಿ ಜಮೀನುಗಳಿಗೆ ಕೊಳವೆಬಾವಿಗಳಿಗೆ ತೊಂದರೆಯಾಗುವ ಸಂಭವವಿದೆ. ಮಳೆಗಾಲದಲ್ಲಿ ಕಪ್ಪೆ , ಮೀನು ಇತ್ಯಾದಿ ಯಾವ ಜಲಪರ ಪ್ರಾಣಿಗಳು ಕಂಡು ಬರುವುದಿಲ್ಲ.
ಘಟಕದವರು ಹೊರಗೆ ಬೀಡುತ್ತಿರುವ ತ್ಯಾಜ್ಯ ನೀರಿನ ಗುಣ ಮಟ್ಟ ತಿಳಿದಿರುವುದಿಲ್ಲ ಎಂದು ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಪತ್ರ ಮೂಲಕ ಆಗ್ರಹಿಸಿದ್ದು, ಈ ಕೈಗಾರಿಕಾ ಘಟಕದ ಸ್ಥಳ ಪರಿಶೀಲನೆ ನಡೆಸಿ, ಈ ನೀರನ್ನು ಸಾರ್ವಜನಿಕ ತೋಡಿಗೆ ಬಿಡದೆ ಘಟಕದವರೇ ಬೇರೆ ವ್ಯವಸ್ಥೆ ಮಾಡುವಂತೆ, ಸಾರ್ವಜನಿಕರ ಹಿತಾಸಕ್ತಿಯಿಂದ ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.