ಮಂಗಳೂರು, ನ. 22 (DaijiworldNews/AK): ಕುದ್ರೋಳಿಯಲ್ಲಿ ಅಧಿಕೃತ ಕಸಾಯಿಖಾನೆ ತೆರೆಯಲು ಒತ್ತಾಯಿಸಿ ಮತ್ತು ಸಂಸ್ಕರಿತ ಆಡು, ಕುರಿ, ದನದ ಮಾಂಸಾಹಾರಿಗಳಿಗೆ ಆಹಾರದ ಹಕ್ಕನ್ನು ನಿರಾಕರಿಸಿದ ಕ್ರಮವನ್ನು ಖಂಡಿಸಿ ಹಾಗೂ ದ.ಕ. ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಕುದ್ರೋಳಿ ಕಸಾಯಿಖಾನೆಯ ಮುಂದೆ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಡಿವೈಎಫ್ಐ ಮಾಜಿ ರಾಜ್ಯಾಧ್ಯಕ್ಷ ಸುನೀಲ್ ಕುಮಾರ್, ರಾಜಕೀಯ ದುರುದ್ದೇಶದಿಂದ ಮುಚ್ಚಿರುವ ನಗರದ ಕುದ್ರೋಳಿಯಲ್ಲಿರುವ ಜಿಲ್ಲೆಯ ಏಕೈಕ ಅಧಿಕೃತ ಕಸಾಯಿಖಾನೆಯ ಬಡ ಮಾಂಸ ವ್ಯಾಪಾರಿಗಳ ಮೇಲೆ ಕೋಕ ಕಾಯ್ದೆ ಹಾಕಿ ರಾಜ್ಯ ಕಾಂಗ್ರೆಸ್ ಸರಕಾರ ಆರೆಸ್ಸೆಸ್ ನೀತಿಯನ್ನು ಪೊಲೀಸರ ಮೂಲಕ ಜಾರಿ ಮಾಡುತ್ತಿದೆ ಎಂದು ಆರೋಪಿಸಿದರು.
ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಮಾತನಾಡಿ, ದ.ಕ.ಜಿಲ್ಲಾಡಳಿತ ಸಂಘ ಪರಿವಾರದ ನಿಯಂತ್ರಣದಲ್ಲಿದೆಯಾ ಎಂಬ ಅನುಮಾನ ಕಾಡುತ್ತಿದೆ. ಜಿಲ್ಲೆಯ ಮಾಂಸಹಾರಿಗಳಿಗೆ ಸಂಸ್ಕರಿತ ಮಾಂಸ ಸರಬರಾಜು ಆಗಬೇಕಾದ ಅಧಿಕೃತ ಕಸಾಯಿಖಾನೆಯನ್ನು ಮುಚ್ಚಿರುವುದು ಕಾನೂನು ಬಾಹಿರವಾಗಿದೆ. ಮುಂದಿನ ಹದಿನೈದು ದಿನಗಳಲ್ಲಿ ಕುದ್ರೋಳಿ ಕಸಾಯಿಖಾನೆ ತೆರೆಯದಿದ್ದರೆ ʼನಗರ ಪಾಲಿಕೆ ಚಲೋ ಹೋರಾಟʼ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಮುಖಂಡರಾದ ಶ್ರೀನಾಥ್ ಕುಲಾಲ್, ನವೀನ್ ಕೊಂಚಾಡಿ, ಮಾಧುರಿ ಬೋಳಾರ, ಮನೋಜ್ ವಾಮಂಜೂರು, ಮನೋಜ್ ಕುಲಾಲ್, ಜಗದೀಶ್ ಬಜಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.