ಭಟ್ಕಳ, ನ. 25 (DaijiworldNews/AA): 'ಆಪರೇಷನ್ ಅಮಾನತ್' ಅಡಿಯಲ್ಲಿ ರೈಲ್ವೆ ಸಂರಕ್ಷಣಾ ಪಡೆಯ ಭಟ್ಕಳ ಔಟ್ಪೋಸ್ಟ್ ಸಿಬ್ಬಂದಿ ಪ್ರಯಾಣಿಕರೊಬ್ಬರು ಮರೆತು ಹೋಗಿದ್ದ ಸುಮಾರು 8 ಲಕ್ಷ ರೂ. ಮೌಲ್ಯದ ವಸ್ತುಗಳಿದ್ದ ಬ್ಯಾಗನ್ನು ಯಶಸ್ವಿಯಾಗಿ ಪತ್ತೆಹಚ್ಚಿ ಅವರಿಗೆ ಹಿಂದಿರುಗಿಸಿದ್ದಾರೆ.

12619 ಸಂಖ್ಯೆಯ ರೈಲಿನB1 ಕೋಚ್ನ 5 ಮತ್ತು 6 ನೇ ಬರ್ತ್ನಲ್ಲಿ ಒಂದು ಕಪ್ಪು ಕೈಚೀಲ (ಹ್ಯಾಂಡ್ಬ್ಯಾಗ್) ಅನ್ನು ಪ್ರಯಾಣಿಕರೊಬ್ಬರು ಮರೆತು ಹೋಗಿದ್ದಾರೆ ಎಂದು ನವೆಂಬರ್ 25 ರಂದು, ZSCR/KRCL ನಿಂದ ಆರ್ಪಿಎಫ್ಗೆ ಸಂದೇಶ ಬಂದಿತ್ತು. ರೈಲು ಭಟ್ಕಳ ತಲುಪಿದಾಗ, HC/RPF ರವಿದಾಸ್ ಗುಂಗಿ ಅವರು ಕೋಚ್ಗೆ ತೆರಳಿ, ಟಿಟಿಇ ಸಹಾಯದೊಂದಿಗೆ ಕೈಚೀಲವನ್ನು ವಶಪಡಿಸಿಕೊಂಡರು.
ಕರ್ತವ್ಯನಿರತ ನಿಲ್ದಾಣ ಮಾಸ್ಟರ್ ಅವರ ಸಮ್ಮುಖದಲ್ಲಿ, ಚೀಲದಲ್ಲಿನ ವಸ್ತುಗಳ ಪಟ್ಟಿಯನ್ನು ತಯಾರಿಸಲಾಯಿತು. ಆ ಚೀಲದಲ್ಲಿ ಒಂದು ಚಿನ್ನದ ಮಾಂಗಲ್ಯ ಸರ, ನಾಲ್ಕು ಚಿನ್ನದ ಬಳೆಗಳು, ಒಂದು ಜೊತೆ ಚಿನ್ನದ ಕಿವಿಯೋಲೆಗಳು, ಚಾರ್ಜರ್ನೊಂದಿಗೆ ಸ್ಯಾಮ್ಸಂಗ್ ಮೊಬೈಲ್ ಫೋನ್ ಮತ್ತು ಇತರೆ ವೈಯಕ್ತಿಕ ವಸ್ತುಗಳು ಪತ್ತೆಯಾದವು.
ಮಹಾರಾಷ್ಟ್ರದ ನಿವಾಸಿ ಮತ್ತು ಬ್ಯಾಗಿನ ವಾರಸುದಾರರಾದ ರಘುವೀರ್ ದೇಶಭಂಡಾರಿ ಅವರನ್ನು ಪತ್ತೆಹಚ್ಚಿ ಮಾಹಿತಿ ನೀಡಲಾಯಿತು. ಅವರು ಪನ್ವೇಲ್ನಿಂದ ಹೊನ್ನಾವರಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ರೈಲಿನಿಂದ ಇಳಿಯುವಾಗ ಬ್ಯಾಗನ್ನು ಮರೆತು ಹೋಗಿದ್ದಾಗಿ ತಿಳಿಸಿದರು.
ಸರಿಯಾದ ಪರಿಶೀಲನೆಯ ನಂತರ, ಆರ್ಪಿಎಫ್ ವಶಪಡಿಸಿಕೊಂಡ ಚೀಲ ಮತ್ತು ಎಲ್ಲಾ ಮೌಲ್ಯಯುತ ವಸ್ತುಗಳನ್ನು ಅದರ ವಾರಸುದಾರರಿಗೆ ಹಸ್ತಾಂತರಿಸಿತು. ಪ್ರಯಾಣಿಕರು ಆರ್ಪಿಎಫ್ ಸಿಬ್ಬಂದಿಯ ಸಮಯೋಚಿತ ಸಹಾಯ ಮತ್ತು ವೃತ್ತಿಪರತೆಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.