ಮಂಗಳೂರು, ನ. 25 (DaijiworldNews/AA): ನ್ಯಾಯವಾದಿ ನೌಷಾದ್ ಕಾಶಿಂಜಿ ಕೊಲೆ ಸಹಿತ ಹಲವು ಪ್ರಕರಣದಲ್ಲಿ ಭಾಗಿಯಾಗಿ, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ನೇತೃತ್ವದ ತಂಡ ಬಂಧಿಸಿದೆ.

ಬೆಳ್ತಂಗಡಿಯ ಮುಗಳಿ ಹೊಸ ಮನೆ ನಿವಾಸಿ ಟಿ.ದಿನೇಶ್ ಶೆಟ್ಟಿ ಯಾನೆ ದಿನ್ನು ಬಂಧಿತ ಆರೋಪಿ.
ಆರೋಪಿಯು ಮಂಗಳೂರು ದಕ್ಷಿಣ ಠಾಣಾ ಅಕ್ರ ಸಂಖ್ಯೆ 144/2009 ರ ಕೊಲೆ ಪ್ರಕರಣದಲ್ಲಿ ಭೂಗತ ಲೋಕದ ಪಾತಕಿ ರವಿ ಪೂಜಾರಿ ಮತ್ತು ಕಲಿ ಯೊಗೀಶ್ ಅವರಿಂದ ಸುಪಾರಿ ಪಡೆದು ನ್ಯಾಯವಾದಿ ಖಾಸೀಂ ನೌಷಾದ್ ನನ್ನು ಕೊಲೆ ಮಾಡಿದ ಆರೋಪದ ಮೇರೆಗೆ ಮಾನ್ಯ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದರಲ್ಲಿ 11 ವರ್ಷ ಕಾರಾಗೃಹ ಶಿಕ್ಷೆ ಅನುಭವಿಸಿ ನಂತರ ಮಾನ್ಯ ಉಚ್ಛ ನ್ಯಾಯಾಲಯಕ್ಕೆ ಅಫೀಲು ಸಲ್ಲಿಸಿ ಡಿಸೆಂಬರ್ 2019 ರಲ್ಲಿ ಬಿಡುಗಡೆಗೊಂಡಿರುತ್ತಾನೆ.
ನಂತರದ ದಿನಗಳಲ್ಲಿ ಕಾವೂರು ಠಾಣೆಯ ಅಕ್ರ ಸಂಖ್ಯೆ 01/2019 ರ ಅಪಹರಣ ಪ್ರಕರಣ, ಮಂಗಳೂರು ಉತ್ತರ ಪೊಲೀಸ್ ಠಾಣೆ ಅಕ್ರ ಸಂಖ್ಯೆ 88/2022 ರ ವಂಚನೆ ಪ್ರಕರಣ ಮತ್ತು ಮಂಗಳೂರು ಉತ್ತರ ಪೊಲೀಸ್ ಠಾಣೆ ಅಕ್ರ ಸಂಖ್ಯೆ 06/2023ರ ಸುಲಿಗೆ ಪ್ರಕರಣಗಳಲ್ಲಿಯೂ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಒಂದೂವರೆ ವರ್ಷದಿಂದ ತಲೆಮರೆಸಿಕೊಂಡವನನ್ನು ಮಂಗಳವಾರದಂದು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಹಾಗೂ ಅವರ ತಂಡ ಆರೋಪಿಯನ್ನು ದಸ್ತಗಿರಿ ಮಾಡಿರುತ್ತಾರೆ.