ಉಡುಪಿ, ನ. 25 (DaijiworldNews/AA): ಪ್ರಧಾನಿ ನರೇಂದ್ರ ಮೋದಿ ಅವರ ಶ್ರೀ ಕೃಷ್ಣ ಮಠದ ಭೇಟಿಯ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲಾಡಳಿತವು ನವೆಂಬರ್ 28ರಂದು ಆಯ್ದ ಪ್ರದೇಶಗಳ ಶಾಲೆಗಳು ಮತ್ತು ಅಂಗನವಾಡಿಗಳಿಗೆ ಒಂದು ದಿನದ ರಜೆ ಘೋಷಿಸಿದೆ.

ಉಡುಪಿ ನಗರ, ಮಲ್ಪೆ ಮತ್ತು ಮಣಿಪಾಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿಗಳು, ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢಶಾಲೆಗಳಿಗೆ ಜಿಲ್ಲಾಡಳಿತವು ರಜೆ ಘೋಷಿಸಿದೆ. ಸಂಚಾರ ಅಡೆತಡೆಗಳಿಂದ ಮಕ್ಕಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಮತ್ತು ಅವರ ಸುರಕ್ಷತೆಗೆ ಆದ್ಯತೆ ನೀಡುವ ಹಿನ್ನೆಲೆ ರಜೆ ಘೋಷಿಸಲಾಗಿದೆ.
ಪ್ರಧಾನಿಯವರ ಭೇಟಿಯ ಸಂದರ್ಭದಲ್ಲಿ ಕೇಂದ್ರೀಯ ಸಚಿವರು, ಕರ್ನಾಟಕದ ರಾಜ್ಯಪಾಲರು, ಮುಖ್ಯಮಂತ್ರಿಗಳು, ರಾಜ್ಯ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ಪ್ರೋಟೋಕಾಲ್ ವ್ಯವಸ್ಥೆಗಳು ಮತ್ತು ಹೆಚ್ಚಿದ ಭದ್ರತಾ ಕ್ರಮಗಳ ಭಾಗವಾಗಿ, ಕಾರ್ಯಕ್ರಮಗಳ ಸುಗಮ ನಿರ್ವಹಣೆಗಾಗಿ ಉಡುಪಿ ಜಿಲ್ಲಾ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಶಿಫಾರಸ್ಸು ಮಾಡಿದ್ದರು.
ಈ ರಜೆಯಿಂದ ತಪ್ಪಿಹೋದ ಶೈಕ್ಷಣಿಕ ಅವಧಿಗಳನ್ನು ಇತರ ಸಾಮಾನ್ಯ ರಜಾದಿನಗಳಲ್ಲಿ ಸರಿದೂಗಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.