ಬಂಟ್ವಾಳ, ನ. 26 (DaijiworldNews/TA): ದೇವಿ ಮಹಾತ್ಮೆ ಯಕ್ಷಗಾನ ನಡೆಯುತ್ತಿದ್ದ ಸಂದರ್ಭ ಹಕ್ಕಿಯೊಂದು ದೇವಿಯನ್ನು ಮುದ್ದಿಸುತ್ತಾ, ಶಿರದ ಮೇಲೆ ಕೂತು, ಹೂವಿನಲ್ಲಿ ಚೆಲ್ಲಾಟವಾಡಿದ ಘಟನೆ ಬಿ.ಸಿ.ರೋಡಿನ ಮೊಡಂಕಾಪು ಬಳಿ ನಡೆದಿದೆ.

ಮೊಡಂಕಾಪು ಚೆನ್ನರಪಾಲು ಎಂಬಲ್ಲಿ ಡೊಂಬಯ್ಯ ಕುಲಾಲ್ ಸಹೋದರರು ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ತಂಡ 6ನೇ ಮೇಳದ ವತಿಯಿಂದ ನಡೆದ ಶ್ರೀ ದೇವಿ ಮಹಾತ್ಮೆ ಯಕ್ಷಗಾನದ ವೇಳೆ ದೇವಿ ವೇಷಧಾರಿ ಸಂದೀಪ್ ಕುಲಾಲ್ ಕೋಳ್ಯೂರು ಶಿರದಲ್ಲಿ ಹಕ್ಕಿಯಿಂದು ಕುಳಿತು ಅಚ್ಚರಿ ಮೂಡಿಸಿದೆ.
ಇದೇ ಸಂದರ್ಭ ಶ್ರೀ ದೇವಿ ಕದಂಬ ವನದಲ್ಲಿ ಕೌಶಿಕೆಯಾಗಿ ಉಯ್ಯಾಲೆಯಲ್ಲಿ ಕುಳಿತಿದ್ದು, ಸುಗ್ರೀವನು ಶುಂಭಾಸುರನಲ್ಲಿ ಕದಂಬ ವನದ ವರ್ಣನೆಯನ್ನು ಹೇಳುತ್ತಿರುವ ಸಂದರ್ಭದಲ್ಲಿ ಹಕ್ಕಿಯೊಂದು ಹಾರಿ ಬಂದು ಶ್ರೀ ದೇವಿ ವೇಷಧಾರಿಯ ಮಡಿಲಲ್ಲಿ ಕುಳಿತಿತ್ತು.
ಬಳಿಕ ಅಲ್ಲಿಂದ ನಿಧಾನವಾಗಿ ಮೇಲೆರುತ್ತಾ ಶಿರದಲ್ಲಿ ಕುಳಿತಿದ್ದರೂ ಶ್ರೀ ದೇವಿ ಪಾತ್ರಧಾರಿ ಸಂದೀಪ್ ಕುಲಾಲ್ ಕೋಳ್ಯೂರು ನಗು ನಗುತ್ತಲೆ ಹಕ್ಕಿಯ ಚಲನೆಯನ್ನು ಗಮನಿಸಿ ಅದನ್ನು ಸವರುತ್ತಿದ್ದರು. ಇತ್ತ ಯಕ್ಷಗಾನ ನೋಡಲು ಬಂದ ಪ್ರೇಕ್ಷಕರು ಕೂಡ ದೇವಿಯ ಶಿರದಲ್ಲಿ ನಿರ್ಭಯವಾಗಿ ಕುಳಿತಿರುವ ಹಕ್ಕಿಯನ್ನು ಎಲ್ಲರನ್ನೂ ವಿಸ್ಮಯಗೊಳಿಸಿತು.